ಗೊಂದಲಕ್ಕೆ ಅವಕಾಶ ಇಲ್ಲದೆ ಸುದ್ದಿಗಳನ್ನು ಪ್ರಕಟಿಸಲಿ

06
ಹೊಳೆನರಸೀಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಉದ್ಘಾಟಿಸಿದರು. ಉದ್ಯಮಿ ಎನ್.ಆರ್. ಅನಂತಕುಮಾರ್, ಬಿ.ವಿ. ಮಲ್ಲಿಕಾಜುನಯ್ಯ, ಎಚ್.ಬಿ.ಮದನ್‌ಗೌಡ, ಬಾಳ್ಳುಗೋಪಾಲ್, ಕೆ.ಆರ್. ಮಂಜುನಾಥ್, ಎಚ್.ವಿ. ಸುರೇಶ್‌ಕುಮಾರ್ ಇದ್ದರು.
Published on

ಹೊಳೆನರಸೀಪುರ: ಪತ್ರಕರ್ತರು ಸುದ್ದಿಯನ್ನು ಬೇಗ ಕೊಡುವ ಆತುರ ಇದ್ದರೂ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲದಂತೆ ಪ್ರಕಟಿಸಬೇಕು ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಸಲಹೆ ನೀಡಿದರು.


ಪಟ್ಟಣದ ಸೋಷಿಯಲ್ ಕ್ಲಬ್ ಸಭಾಂಗಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಖಡ್ಗಕ್ಕಿಂತ ಲೇಖನಿ ಹರಿತ ಎನ್ನುತ್ತಾರೆ. ಈ ಲೇಖನಿ ಯಾರಿಗೂ ಹಾನಿ ಆಗದಂಥ ಸುದ್ದಿಗಳನ್ನು ನೀಡಬೇಕು ಎಂದು ಕಿವಿಮಾತು ತಿಳಿಸಿದರು.


ಕಾರ್ಯಾಂಗ, ನ್ಯಾಯಾಂಗ, ರಾಜ್ಯಾಂಗದಷ್ಟೇ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಪತ್ರಿಕಾರಂಗ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕೆಲಸವನ್ನು ಸಮರ್ಥವಾಗಿ ಮಾಡುತ್ತಿದೆ. ಮಾಧ್ಯಮಗಳು ರೈತರ, ಕಾರ್ಮಿಕರ, ಸ್ತ್ರೀಯರ ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕುಚೆಲ್ಲಿ ಅವರಿಗೆ ಸಹಕಾರಿ ಆಗಿರಬೇಕು ಎಂದರು.


ಅಖಿಲ ಭಾರತ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಮಾತನಾಡಿ, ಸದಾಕಾಲ ಕ್ರಿಯಾಶೀಲರಾಗಿರುವ ಪತ್ರಕರ್ತರು ಪತ್ರಿಕಾ ರಂಗದಲ್ಲಿ ಬಹಳ ವರ್ಷ ಉಳಿಯುತ್ತಾರೆ. ಆದರೆ ಕೆಲ ಪತ್ರಕರ್ತರು ಸಂಘದ ಸದಸ್ಯತ್ವ ಪಡೆದು ವರದಿಗಾರಿಕೆ ಬಿಟ್ಟು ಬೇರೆ ಕ್ಷೇತ್ರದಲ್ಲಿ ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ ಎಂದು ವಿಷಾದಿಸಿದರು.


ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ.ಸುರೇಶ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.


ಉದ್ಯಮಿ, ಸಮಾಜ ಸೇವಕ ಎನ್.ಆರ್.ಅನಂತ್‌ಕುಮಾರ್, ಪತ್ರಿಕಾ ವಿತರಕರು, ನಿವೃತ್ತ ಪತ್ರಕರ್ತರು, ಸಾಧಕರು, ಜಿಲ್ಲಾ ಪತ್ರಿಕೆಗಳ ಸಂಪಾದಕರು, ಜಿಲ್ಲಾ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.


ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ಅಪರ ಕಾರ್ಯದರ್ಶಿ ಎಚ್.ಬಿ.ಮದನ್‌ಗೌಡ, ಕಾರ್ಯಕಾರಿ ಸಮಿತಿ ಸದಸ್ಯ ಕೆ.ಆರ್.ಮಂಜುನಾಥ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ್ಳುಗೋಪಾಲ್, ಸಣ್ಣ ಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ಜೆ.ಆರ್.ಕೆಂಚೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net