ಗೊಂಡಕ್ಕೆ ಕುರುಬ ಪರ್ಯಾಯ ಪದ

gurunath pujari
Published on

ಕಲಬುರಗಿ: ಯಾದಗಿರಿ, ಬೀದರ್, ಕಲಬುರಗಿ ಜಿಲ್ಲೆಯಲ್ಲಿನ ಎಲ್ಲ ಕುರುಬರೇ ಗೊಂಡ ಸಮುದಾಯದವರಾಗಿದ್ದು, ಅವರಿಗೆ ಕುರುಬ ಪರ್ಯಾ ಪದ ಎಸ್‌ಟಿ ಎಂದು ಪರಿಗಣಿಸಬೇಕು ಎಂದು ಕರ್ನಾಟಕ ಪ್ರದೇಶದ ಕುರುಬರ ಸಂಘದ ಅಧ್ಯಕ್ಷ ಗುರುನಾಥ ಪೂಜಾರಿ ಆಗ್ರಹಿಸಿದರು.

೧೯೩೧ರ ಜಾತಿಗಣತಿ ಆಧಾರದಲ್ಲಿಯೇ ಹಿಂದೆ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಆಗಿದ್ದಾಗ ಗೊಂಡ ಪರ್ಯಾಯ ಪದ ಕುರುಬ ಎಸ್.ಟಿ. ಎಂದು ಪರಿಗಣಿಸಲು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಆದರೆ ಇದುವರೆಗೂ ಸ್ಪಂದಿಸಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಸ್ತುತ ಬೀದರ್ ಜಿಲ್ಲೆಯಲ್ಲಿ ಗೊಂಡ ಕುರುಬರಿಗೆ ಎಸ್‌ಟಿ ಪ್ರಮಾಣ ಪತ್ರ ನೀಡುವಲ್ಲೂ ತೊಂದರೆ, ಆಕ್ಷೇಪಗಳು ವ್ಯಕ್ತವಾಗುತ್ತಿದೆ. ಆದ್ದರಿಂದ ಗೊಂಡ ಪದಕ್ಕೆ ಕುರುಬ ಪದ ಪರ್ಯಾಯ ಎಂದು ಪರಿಗಣಿಸಬೇಕು. ಈ ಕುರಿತು ಹಲವು ವರ್ಷದಿಂದ ಮನವಿ ಸಲ್ಲಿಸುತ್ತಲೇ ಬಂದರೂ ಸ್ಪಂದಿಸುತ್ತಿಲ್ಲ. ಆದ್ದರಿಂದ ಸಂಘದಿAದ ನಿರಂತರ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸರಣಿ ಪ್ರತಿಭಟನೆ: ಕಾಗಿನೆಲೆಯ ಶ್ರೀ ಸಿದ್ದರಾಮನಂದ ಸ್ವಾಮೀಜಿ ನೇತೃತ್ವದಲ್ಲಿ ಕಲಬುರಗಿ, ಯಾದಗಿರಿ, ಬೀದರ್ ಜಿಲ್ಲೆಯಲ್ಲಿ ಡಿ.೨೧ರಿಂದ ಜ.೩ರವರೆಗೆ ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗುವುದು. ಡಿ.೨೧ರಂದು ಅಫಜಲಪುರ, ಸುರಪುರ, ಚಿಟಗುಪ್ಪ, ಡಿ.೨೨ರಂದು ಸೇಡಂ, ಬಸವಕಲ್ಯಾಣ, ಡಿ.೨೬ರಂದು ಶಹಾಬಾದ್, ಭಾಲ್ಕಿ, ಡಿ.೨೭ರಂದು ಕಾಳಗಿ, ಹುಲಸೂರು, ಡಿ.೨೮ರಂದು ಚಿತ್ತಾಪುರ, ಶಹಾಪುರ, ಕಮಲನಗರ, ಡಿ.೨೯ ಜೇವರ್ಗಿ, ಹುಮನಾಬಾದ್, ಜ.೧ರಂದು ಕಲಬುರಗಿ, ಚಿಂಚೋಳಿ, ಯಾದಗಿರಿ, ಹುಣಸಗಿ, ಬೀದರ್, ಔರಾದ್, ಜ.೨ರಂದು ಕಮಲಾಪುರ, ಯಡ್ರಾಮಿ, ವಡಗೇರಾ, ಜ.೩ರಂದು ಆಳಂದ ಗುರುಮಿಟಕಲ್‌ನಲ್ಲಿ ಬೃಹತ್ ಹೋರಾಟ ನಡೆಸಲಾಗುವುದು. ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ವಿನಂತಿಸಿದರು.

ಪ್ರಮುಖರಾದ ತಿಪ್ಪಣ್ಣ ಬಳಬಟ್ಟಿ, ಭೈಲಪ್ಪ ನೆಲೋಗಿ, ನಿರ್ಮಲಾ ಬರಗಾಲಿ, ಗಣಪತಿ ಮಿಣಜಗಿ, ಸಾಯಬಣ್ಣ ಮಲ್ಲಾಬಾದಿ, ನಾಗೇಂದ್ರಪ್ಪ ಪೂಜಾರಿ, ಶಿವಲಿಂಗಪ್ಪ ವಗ್ಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net