ಗೇರುಸೊಪ್ಪ ಕ್ಷೇತ್ರದಲ್ಲಿ ಉತ್ಸವಕ್ಕೆ ಚಾಲನೆ

20 kgl 1 a
ನವರಾತ್ರಿ ಉತ್ಸವದ ಅಂಗವಾಗಿ ಗೇರುಸೊಪ್ಪದ ಕ್ಷೇತ್ರದಲ್ಲಿ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಪೂಜೆ ಸಲ್ಲಿಸಿದರು.
Published on

ಕಾರ್ಗಲ್: ಗೇರುಸೊಪ್ಪದ ಚತುರ್ಮುಖ ಬಸದಿಯು ಜೈನ ವಾಸ್ತುಶಿಲ್ಪವನ್ನು ಬಿಂಬಿಸುವ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಎಂದು ಸೋಂದಾ ಜೈನ ಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಹೇಳಿದರು.

ಸೋಂದಾ ಜೈನಮಠದ ಶಾಖಾ ಮಠ ಗೇರುಸೊಪ್ಪದ ಭಗವಾನ್ ಪಾರ್ಶ್ವನಾಥ ಸ್ವಾಮೀಜಿ ಹಾಗೂ ಮಹಾಮಾತೆ ಜ್ವಾಲಾಮಾಲಿನಿ ಅಮ್ಮನ ಕ್ಷೇತ್ರದಲ್ಲಿ ನಡೆಯುವ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಭಗವಾನ್ ಆದಿನಾಥ ಸ್ವಾಮಿ, ನೇಮಿನಾಥ ಸ್ವಾಮಿ, ಪಾರ್ಶ್ವನಾಥ ಸ್ವಾಮಿ ಹಾಗೂ ವರ್ಧಮಾನ ಸ್ವಾಮಿ ಬಸದಿಗಳು ಹಾಗೂ ಪಟ್ಟದದೇವಿ ಮಹಾಮಾತೆ ಜ್ವಾಲಾಮಾಲಿನಿ ಅಮ್ಮ ಇಲ್ಲಿನ ಅದೇವತೆ. 1550ರ ಸಂದರ್ಭ ಕಾಳುಮೆಣಸಿನ ರಾಣಿ ಎಂದೇ ಖ್ಯಾತಿ ಪಡೆದಿದ್ದ ಚನ್ನಾಬೈರಾದೇವಿ ಗೇರುಸೊಪ್ಪ ಹಾಗೂ ಹಾಡವಳ್ಳಿ ಈ ಎರಡು ರಾಜ್ಯಗಳಿಗೂ ಏಕೈಕ ಅರಸಿಯಾಗಿ ಆಳ್ವಿಕೆ ನಡೆಸಿದ್ದಳು. ದೇವರ ಮೇಲೆ ಅಪಾರ ನಂಬಿಕೆ ಹೊಂದಿದ್ದಳು. ಈ ಮೂಲಕ ರಾಜಕೀಯವಾಗಿಯೂ ಗೇರುಸೊಪ್ಪ ಪ್ರಮುಖ್ಯತೆ ಪಡೆದ ಕ್ಷೇತ್ರ ಎಂದರು.

ರಾಣಿ ಸೆರೆಯಾಗಿ ಕೆಳದಿಯಲ್ಲಿ ಆಕೆಯನ್ನು ಬಂಸಿಟ್ಟಾಗಲೂ ಆಕೆ ದೇವರ ಪೂಜೆ ನಿಲ್ಲಿಸಲಿಲ್ಲ. ಆಕೆ ಸಲ್ಲೇಖನ ವ್ರತ ಮಾಡಿ ಮರಣ ಹೊಂದಿ, ತನ್ನನ್ನು ತನ್ನ ರಾಜ್ಯದಲ್ಲೇ ಅಂತ್ಯಕ್ರಿಯೆ ಮಾಡಬೇಕು ಎಂಬ ಹಠ ಹೊಂದಿದ್ದಳು. ಹಾಗೆಯೇ ತನ್ನ ಪ್ರಾಂತ್ಯದ ಆವಿನಹಳ್ಳಿ ಪ್ರದೇಶದಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಿದ್ದು ಇತಿಹಾಸದಲ್ಲಿ ಉಲ್ಲೇಖವಿದೆ ಎಂದು ತಿಳಿಸಿದರು.

ಗೇರುಸೊಪ್ಪವನ್ನು ಮುಲಕಿಪುರ, ಕ್ಷೇಮಪುರ, ನಗರಬಸ್ತಿಕೆರೆ ಎಂತಲೂ ಕರೆಯಲಾಗುತಿತ್ತು. ಜೈನ ಧರ್ಮದ ನಾಲ್ಕು ಪೀಠಗಳ ಪೈಕಿ ಈ ಕ್ಷೇಮಪುರವು (ಗೇರುಸೊಪ್ಪ) ಒಂದು ಸ್ಥಾನವನ್ನು ಪಡೆದುಕೊಂಡಿದ್ದು, 17 ಮಂದಿ ಗುರು ಪರಂಪರೆಯನ್ನು ಹೊಂದಿದೆ ಎಂದರು.

ಪಶ್ಚಿಮ ಘಟ್ಟದ ಶರಾವತಿ ಕಣಿವೆಯ ಕ್ಷೇಮಪುರ ಕ್ಷೇತ್ರ ವ್ಯಾಪ್ತಿಯಲ್ಲಿ ರಾಣಿ ಚನ್ನಬೈರಾದೇವಿಯು 108 ಬಸದಿಗಳನ್ನು ಕಟ್ಟಿಸಿರುವ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ. ಈ ತಪ್ಪಲಿನಲ್ಲಿ ಸಾಕಷ್ಟು ದೇವಾಸ್ಥಾನ ಹಾಗೂ ಬಸದಿಗಳು ಅಡಗಿವೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net