

ಬಳ್ಳಾರಿ : ತುಂಗಭದ್ರಾ ಜಲಾಶಯದ 19ನೇ ಗೇಟ್ ಕೂಡಲೇ ಸರಿಪಡಿಸುವಂತೆ ಆಗ್ರಹಿಸಿ, ಕನ್ನಡ ನಾಡು ರೈತ ಸಂಘಟನೆಯು ಪ್ರತಿಭಟಿಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರ ಮನವಿ ಸಲ್ಲಿಸಿದರು.
ಕನ್ನಡ ನಾಡು ರೈತ ಸಂಘ ರಾಜ್ಯಾಧ್ಯಕ್ಷ ಈಶ್ವರಪ್ಪ ಮೆಣಸಿನ ಮಾತನಾಡಿ, ಕ್ರಸ್‌ಗೇಟ್‌ಗಳ ನಿರಂತರ ಪರಿಶೀಲನೆ ಮತ್ತು ಅಗತ್ಯ ಕ್ರಮವಹಿಸುವಲ್ಲಿ ಆದ ಲೋಪದಿಂದಾಗಿಯೇ ಜಲಾಶಯದ 19ನೇ ಗೇಟ್ ಚೈನ್ ಲಿಂಕ್ ಮುರಿದು ಬಿದ್ದಿದೆ. 2019ರಲ್ಲಿ ಇದೆ ಜಲಾಶಯದ ಎಡದಂಡೆ ಮೇಲ್ಮಟ್ಟದ ಕಾಲುವೆಯ ಬಳಿ ಗೇಟ್ ಮುರಿದು ಸಣ್ಣ ಪ್ರಮಾಣದ ಅವಘಡ ಉಂಟಾಗಿ ಅಪಾರ ಪ್ರಮಾಣದ ನೀರು ಪೋಲಾಗಿ ರೈತರು ಸಂಕಷ್ಟ ಎದುರಿಸಿದ್ದರು. ಮುಂಜಾಗೃತ ಕ್ರಮವಾಗಿ ಅಧಿಕಾರಿಗಳು ನಿಗಾ ವಹಿಸಿದ್ದರೆ ಈ ಅವಘಡ ಸಂಭವಿಸುತ್ತಿರಿಲ್ಲ. ದುರಸ್ತಿಗೆ ಶೇ.60 ಟಿಎಂಸಿ ನೀರು ಹೊರಗಡೆ ಹರಿಸಲಾಗುತ್ತಿದೆ, ಇದರಿಂದಾಗಿ ಈ ಅಣೆಕಟ್ಟೆಯ ಫಲಾನುಭವಿಗಳಾದ ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಗಳ ಅಂದಾಜು 30 ಲಕ್ಷ ಎಕರೆ ನೀರಾವರಿ ಪ್ರದೇಶ ರೈತರ ಭವಿಷ್ಯಕ್ಕೆ ತೀವ್ರ ಅತಂಕ ಉಂಟು ಮಾಡಿದೆ. ತಕ್ಷಣವೇ ಗೇಟ್ ದುರಸ್ತಿಗೊಳಿಸಿ, ನೀರು ಉಳಿಸಬೇಕು ಎಂದು ಒತ್ತಾಯಿಸಿದರು.