

ಬೆಂಗಳೂರು: ಬಿಬಿಎಂಪಿ ಆಟದ ಮೈದಾನದ ಗೇಟ್ ಬಿದ್ದು ಮೃತಪಟ್ಟ ಬಾಲಕ ನಿರಂಜನ್ ನಿವಾಸಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭೇಟಿ ನೀಡಿ ಪೋಷಕರಿಗೆ 10 ಲಕ್ಷ ರೂ. ಮೊತ್ತದ ಪರಿಹಾರದ ಚೆಕ್ ವಿತರಿಸಿದರು.
ಮಲ್ಲೇಶ್ವರದ ಕೋದಂಡರಾಮಪುರದ ಬಾಲಕನ ನಿವಾಸಕ್ಕೆ ಡಿಸಿಎಂ ಶಿವಕುಮಾರ್ ಹಾಗೂ ಸಚಿವ ದಿನೇಶ್ ಗುಂಡೂರಾವ್ ಅವರು ಭೇಟಿ ಮಾಡಿ ಬುಧವಾರ ಸಾಂತ್ವನ ಹೇಳಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಪಾಲಿಕೆ ಆಟದ ಮೈದಾನದಲ್ಲಿ ಗೇಟ್ ಬಿದ್ದು ಮೃತಪಟ್ಟ ಬಾಲಕನ ಮನೆಗೆ ಆಗಮಿಸಿ ಅವರ ಪೋಷಕರಿಗೆ ಸಾಂತ್ವನ ಹೇಳಿದ್ದೇವೆ. ಬಿಬಿಎಂಪಿಯಿಂದ 5 ಲಕ್ಷ ರೂ. ಹಾಗೂ ಪಕ್ಷದ ಬ್ಲಾಕ್ ಕಾಂಗ್ರೆಸ್ ವತಿಯಿಂದ 5 ಲಕ್ಷ ರೂ. ಪರಿಹಾರ ಸೇರಿ ಒಟ್ಟು 10 ಲಕ್ಷ ರೂ. ಮೊತ್ತದ ಚೆಕ್ ನೀಡಲಾಗಿದೆ ಎಂದರು.
ಮೃತಪಟ್ಟ ಬಾಲಕನ ಕಣ್ಣುಗಳನ್ನು ಕುಟುಂಬದವರು ದಾನ ಮಾಡಿ ನಮಗೆ ಮಾದರಿಯಾಗಿದ್ದಾರೆ. ಬಡತನವಿದ್ದರೂ ಸಮಾಜ ಹಾಗೂ ದೇಶಕ್ಕೆ ಕಾಣಿಕೆ ನೀಡುವ ತೀರ್ಮಾನವನ್ನು ನಾವು ಮೆಚ್ಚಬೇಕು. ಮಗನನ್ನು ಕಳೆದುಕೊಂಡಿರುವ ನೋವನ್ನು ಭರಿಸುವ ಶಕ್ತಿ ಅವರಿಗೆ ಸಿಗಲಿ ಎಂದು ಡಿಸಿಎಂ ಆಶಿಸಿದರು.
ವಿದ್ಯಾಭ್ಯಾಸಕ್ಕೆ ನೆರವು:
ಮೃತ ಬಾಲಕನ ಕುಟುಂಬದ ಜತೆ ಕಾಂಗ್ರೆಸ್ ಪಕ್ಷ ನಿಲ್ಲಲಿದೆ. ಈ ಕಾರಣದಿಂದ ದಿನೇಶ್ ಗುಂಡೂರಾವ್ ಫೌಂಡೇಶನ್ ವತಿಯಿಂದ ಮೃತ ಬಾಲಕನ ತಂಗಿಯ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲಿದ್ದೇವೆ. ಮಾನವೀಯತೆ ದೃಷ್ಟಿಯಿಂದ ಈ ನೆರವು ನೀಡುತ್ತಿದ್ದೇವೆ ಎಂದು ಡಿಸಿಎಂ ವಿವರಿಸಿದರು.
ಗೇಟ್‌ಗಳ ಪರಿಶೀಲನೆಗೆ ಸೂಚನೆ:
ಬಿಬಿಎಂಪಿ ನಿರ್ಲಕ್ಷ್ಯದಿಂದ ಹಾಲಿ ಘಟನೆ ನಡೆದಿದೆ. ಇತರ ಪಾರ್ಕ್ ಹಾಗೂ ಆಟದ ಮೈದಾನಗಳ ಪರಿಸ್ಥಿತಿ ಯಾವ ರೀತಿ ಇದೆ ಎಂಬುದನ್ನು ಅರಿಯಲು ಪಾಲಿಕೆಯಿಂದ ವರದಿ ಕೇಳಿದ್ದೇವೆ. ವರದಿ ಕೈಸೇರಿದ ನಂತರ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ನಗರದ ಇತರ ಕಡೆಗಳಲ್ಲಿಯೂ ಗೇಟ್ ಪರಿಶೀಲನೆ ನಡೆಸಲು ಕೂಡ ಮುಖ್ಯ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಡಿಸಿಎಂ ತಿಳಿಸಿದರು.