

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಜನ್ಮದಿನದ ಪ್ರಯುಕ್ತ ಬಸವರಾಜ ಅಮ್ಮಿನಬಾವಿ ಗೆಳೆಯರ ಬಳಗದ ವತಿಯಿಂದ ಇಲ್ಲಿಯ ನೆಹರು ಮೈದಾನದಲ್ಲಿ ನ.23ರಿಂದ ಐದು ದಿನಗಳವರೆಗೆ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ ಅಮ್ಮಿನಬಾವಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಲ್ಹಾದ ಜೋಶಿ ಕಪ್ ಹೆಸರಿನ ಈ ಪಂದ್ಯಾವಳಿಗೆ ಈಗಾಗಲೇ 23 ತಂಡಗಳು ಹೆಸರು ನೋಂದಾಯಿಸಿವೆ. ಪೂರ್ವ ವಿಧಾನಸಭಾ ಕ್ಷೇತ್ರದ ವಿವಿಧ ವಾರ್ಡ್ಗಳು, ಪತ್ರಕರ್ತರ ಸಂಘ, ಎಚ್ಡಿಎಂಸಿ, ಹೆಸ್ಕಾಂ, ಪೊಲೀಸ್ ಇಲಾಖೆಗಳ ತಂಡಗಳು ಭಾಗವಹಿಸಲಿವೆ ಎಂದರು.
ಈ ಪಂದ್ಯಾವಳಿಗಾಗಿ ಮುಂಬೈನಿಂದ ತಂದಿರುವ ಸುಮಾರು ನಾಲ್ಕು ಅಡಿ ಎತ್ತರದ ವಿಶೇಷ ಟ್ರೋಫಿಯನ್ನು ನ. 20ರಂದು ಸಂಜೆ ನಗರದ ದುರ್ಗದಬೈಲ್ ಸರ್ಕಲ್ನಲ್ಲಿ ಅನಾವರಣ ಮಾಡಲಾಗುವುದು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಪಾಲ್ಗೊಳ್ಳುವರು. 23ರಂದು ಬೆಳಗ್ಗೆ 11ಕ್ಕೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಟೂರ್ನಿ ಉದ್ಘಾಟಿಸುವರು ಎಂದು ಹೇಳಿದರು.
ವಿಜೇತರಿಗೆ ಮೊದಲ ಬಹುಮಾನ 20 ಸಾವಿರ ರೂ. ಹಾಗೂ ಟ್ರೋಫಿ, ದ್ವಿತೀಯ ಬಹುಮಾನ 10 ಸಾವಿರ ರೂ. ಟ್ರೋಫಿ ನೀಡಲಾಗುವುದು. ಬೆಸ್ಟ್ ಆಲ್ ರೌಂಡರ್ 2,500 ರೂ, ಬೆಸ್ಟ್ ಬ್ಯಾಟ್ಸಮನ್, ಬೆಸ್ಟ್ ಬೌಲರ್ಗೆ ತಲಾ ಸಾವಿರ ರೂ. ನೀಡಿ ಗೌರವಿಸಲಾಗುವುದು ಎಂದರು.
ದುಶ್ಚಟಗಳಿಂದ ದೂರವಿದ್ದು ಯುವಕರು ಕ್ರೀಡಾಕೂಟಗಳಲ್ಲಿ ಭಾಗವಹಿಸುವಂತೆ ಪ್ರೇರಣೆ ನೀಡುವ ಉದ್ದೇಶದಿಂದ ಪಂದ್ಯಾವಳಿ ಆಯೋಜಿಸಲಾಗುತ್ತಿದೆ ಎಂದರು.
ಚಂದ್ರಶೇಖರ ಗೋಕಾಕ, ರಾಜು ಕೋರ್ಯಾನಮಠ, ಪ್ರಭು ನವಲಗುಂದಮಠ, ಇತರರು ಗೋಷ್ಠಿಯಲ್ಲಿದ್ದರು.