

ಅಥಣಿ: ಕೋವಿಡ್ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರವನ್ನು ಉಚಿತವಾಗಿ ಹಾಗೂ ವಿಧಿವತ್ತಾಗಿ ನೆರವೇರಿಸುವ ಮೂಲಕ ಅಥಣಿ ಪಟ್ಟಣದಲ್ಲಿನ ಗೆಳೆಯರ ಬಳಗ ಗಮನ ಸೆಳೆಯುತ್ತಿದೆ.
ಗೆಳೆಯರ ಬಳಗದ ಈ ಮಾನವೀಯ ಕಾರ್ಯ ಇತರರಿಗೂ ಮಾದರಿಯಾಗಿದೆ. ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ರುದ್ರಭೂಮಿಯಲ್ಲಿರುವ ಕೆಲವರು ಸಾವಿರಾರು ರೂ. ಪಡೆದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಗೆಳೆಯರ ಬಳಗದ 12 ಸದಸ್ಯರು ಒಂದು ವಾರದಿಂದ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನೆರವೇರಿಸುತ್ತಿದ್ದಾರೆ. ಅಲ್ಲದೆ, ತಮ್ಮ ಸ್ವಂತ ಖರ್ಚಿನಿಂದಲೇ ಅಂತ್ಯಕ್ರಿಯೆಗೆ ಬೇಕಾಗುವ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಗೆಳೆಯರ ಬಳಗದ ಸದಸ್ಯರಾದ ಸಿದ್ದು ಮಾಳಿ, ಪ್ರಶಾಂತ ತೋಡಕರ, ಅರುಣ ಮಾಳಿ, ರಶೀದ ಶೇಡಬಾಳೆ, ಮಹಾದೇವ ಅಡಹಳ್ಳಿ, ಜಗನ್ನಾಥ ಬಾಮನೆ, ಆನಂದ ಮಾಕಾಣಿ, ಮಯೂರೇಶ ಮಂಗಸೂಳಿ, ಪ್ರಮೋದ ಚಂಡಕೆ, ಮಲ್ಲೇಶ ಕಾಂಬಳೆ, ಪ್ರಕಾಶ ಜಾಧವ ಇತರರು ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸುತ್ತಿದ್ದಾರೆ. ಪಟ್ಟಣದಲ್ಲಿ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸುವುದಿದ್ದಲ್ಲಿ
ಸಾರ್ವಜನಿಕರು ಮೊ.8546868005 ಸಂಪರ್ಕಿಸಬಹುದು ಎಂದು ಗೆಳೆಯರ ಬಳಗ ಸದಸ್ಯ ಮಲ್ಲೇಶ ಪಟ್ಟಣ ತಿಳಿಸಿದ್ದಾರೆ.