ಗೆಳೆತನ ಉಳಿಯಬೇಕಾದರೆ ಅದು ಸದಾ ಬೆಳೆಯುತಿರಬೇಕು: ಎಚ್.ಬಿ. ದೇವಣ್ಣ ಅಭಿಮತ

H B Devanna (Jss)
Published on

ಮೈಸೂರು: ಪರಸ್ವರ ಗೆಳೆತನ ಉಳಿಯಬೇಕಾದರೆ ಅದು ಸದಾ ಬೆಳೆಯುತಿರಬೇಕು ಎಂದು ಜೆಎಸ್‌ಎಸ್ ಕಾಲೇಜಿನ ಪ್ರಾಧ್ಯಾಪಕ ಎಚ್.ಬಿ. ದೇವಣ್ಣ ಹೇಳಿದರು.
ಶ್ರಾವಣಮಾಸದ ಅಂಗವಾಗಿ ಸುತ್ತೂರಿನ ಗದ್ದುಗೆಯಲ್ಲಿ ಆಯೋಜಿಸಿದ್ದ 16ನೇ ದಿನದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಗತ್ತಿನ ಎಲ್ಲ ಸಂಬಂಧಗಳಲ್ಲಿ ಶ್ರೇಷ್ಠವಾದುದು ಸ್ನೇಹ ಸಂಬಂಧ. ಅನೇಕ ಸಂದರ್ಭಗಳಲ್ಲಿ ವ್ಯಕ್ತಿ ಸಂಕಷ್ಟಗಳಿಗೆ ತುತ್ತಾದಾಗ ಅವನ ಒಡಹುಟ್ಟಿದವರೇ ಕೈಬಿಡುವುದುಂಟು. ಆದರೆ ಸ್ನೇಹಿತ ತನ್ನನ್ನು ನಂಬಿದ ಗೆಳೆಯನನ್ನು ಅಷ್ಟು ಸುಲಭವಾಗಿ ಕೈ ಬಿಡಲಾರ. ಸಮಾನ ಮನೋಧರ್ಮ, ಏಕರೂಪವಾದ ಜೀವನ ಶೈಲಿ ಹಾಗೂ ಸಮಾನ ಆಸಕ್ತಿಗಳಿರುವೆಡೆ ಮಾತ್ರ ಗೆಳೆತನ ಉಳಿಯಲು ಸಾಧ್ಯ ಅಲ್ಲಿ ಸ್ವಾರ್ಥಕ್ಕೆ ಲವಲೇಶವೂ ಅವಕಾಶವಿರುವುದಿಲ್ಲ ಎಂದರು.
ಗೆಳೆತನವು ಬದುಕಿಗೆ ಸಂತೋಷ, ಸಂಭ್ರಮ ಹಾಗೂ ಆನಂದದ ಸಮಸ್ತ ಅನುಭೂತಿಯನ್ನು ತಂದುಕೊಡುತ್ತದೆ. ಸ್ನೇಹಕ್ಕೆ ಬೇಕಾಗುವುದು ಶುದ್ಧ ಅನುಭೂತಿ ಮಾತ್ರ. ಅದಿಲ್ಲದಿದ್ದರೆ ಸ್ನೇಹ ಉಳಿಯಲಾರದು, ಬೆಳೆಯಲಾರದು. ಸ್ನೇಹ ಎನ್ನುವುದು ಈಗಿನ ವ್ಯವಹಾರಿಕ ಪ್ರಪಂಚದಲ್ಲಿ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ. ಮನುಷ್ಯನ ಬದುಕು ದಿನೇ ದಿನೆ ಯಾಂತ್ರಿಕವಾಗುತ್ತಿದೆ. ಸ್ನೇಹವು ಎಂದೂ ಕೃತಕಗೋಡೆಯ ಮೇಲೆ ನಿಲ್ಲುವುದಿಲ್ಲ, ಅದು ಸಹಜವಾದುದು ಎಂದು ಅಭಿಪ್ರಾಯಪಟ್ಟರು.
ಆಧುನಿಕ ಪೂರ್ವಗ್ರಾಮೀಣ ಬದುಕಿನ ಕಥನಗಳಲ್ಲಿಯೂ ನಿಜಜೀವನದಲ್ಲಿಯೂ ಗೆಳೆತನದ ಪರಮಾವಧಿಯನ್ನು ಕಂಡಿದ್ದೇವೆ. ದ್ವೇಷವೂ ಸ್ನೇಹದಲ್ಲಿ ಮಾರ್ಪಾಡಾಗಿರುವುದುಂಟು. ವ್ಯಕ್ತಿಯು ಹೆಣ್ಣು, ಹೊನ್ನು, ಮಣ್ಣುಗಳಿಗಾಗಿ ಹೋರಾಡುತ್ತಾನೆ. ಅವನು ಈ ಮೂರರ ನೆಲೆಯ ಮೇಲೆ ಬದುಕು ನಿಂತಿದೆ ಎಂದು ಭಾವಿಸುತ್ತಾನೆ. ಆದರೆ ಅದು ಕ್ಷಣಿಕ. ಅದಕ್ಕಿಂತ ಭಿನ್ನವಾದ ಸುಂದರ ಬದುಕುಂಟು. ಅದು ತನ್ನನ್ನು ಎತ್ತರಿಸಿ, ಮತ್ತೊಬ್ಬರನ್ನು ಉದ್ಧರಿಸಿ ನಿಲ್ಲಿಸುತ್ತದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net