ಗೆಲ್ಲುವ ಹಠ, ಪರಿಶ್ರಮ, ಶ್ರದ್ಧೆಯಿದ್ದರೆ ಯಶಸ್ಸು:  ಡಾ.ಆನಂದ ಸಂಕೇಶ್ವರ

mysore
Published on

ಮೈಸೂರು: ಗೆಲುವಿನ ಹಠ, ಸವಾಲು ಸ್ವೀಕರಿಸುವ ಮನೋಭಾವ, ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಮಾತ್ರ ಉದ್ಯಮದಲ್ಲಿ ಯಶಸ್ವಿ ಗಳಿಸಲು ಸಾಧ್ಯ...!

ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ ಅವರ ಸ್ಪಷ್ಟ ನುಡಿಗಳಿವು.

ಅಂತಾರಾಷ್ಟ್ರೀಯ ಲಿಂಗಾಯತ ಯೂತ್ ಫೋರಂ ವತಿಯಿಂದ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನ್‌ಕ್ಲೇವ್ ಸಮಾವೇಶದ ವಿಚಾರಗೋಷ್ಠಿಯಲ್ಲಿ ಶನಿವಾರ ಸುದೀರ್ಘವಾಗಿ ಮಾತನಾಡಿದರು.

ಕಿಕ್ಕಿರಿದು ತುಂಬಿದ್ದ ಸೆಮಿನಾರ್ ಹಾಲ್‌ನಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರಲ್ಲೂ ಪ್ರತಿಭೆ ಸುಪ್ತವಾಗಿರುತ್ತದೆ. ಅದನ್ನು ಗುರುತಿಸಿ ಬಳಸಿಕೊಳ್ಳಬೇಕು. ಗುರಿ ಹಾಕಿಕೊಂಡು ನಿರಂತರ ಶ್ರಮ ಹಾಕಬೇಕು. ಆಗಲೇ ಫಲ ದೊರೆಯುತ್ತದೆ ಎಂದರು.

ವಿಆರ್‌ಎಲ್ ಸ್ಥಾಪನೆ ಮಾಡಿದಾಗ ನಮ್ಮ ತಂದೆ ವಿಜಯ ಸಂಕೇಶ್ವರ ಅವರ ಬಳಿ ಒಂದು ಲಾರಿ ಇತ್ತು. ಸತತ ಪರಿಶ್ರಮದಿಂದ ಇಂದು ಬೃಹತ್ ಉದ್ದಿಮೆ ನಿರ್ಮಾಣವಾಗಿದೆ. ದೇಶದ ದೊಡ್ಡ ಲಾಜಿಸ್ಟಿಕ್ ಕಂಪನಿಯಾಗಿ ‘ವಿಆರ್‌ಎಲ್ ಲಾಜಿಸ್ಟಿಕ್’ ಹೊರಹೊಮ್ಮಿದೆ. 6,200 ವಾಣಿಜ್ಯ ವಾಹನಗಳಿವೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ದೇಶಾದ್ಯಂತ 1,250 ಶಾಖೆಗಳನ್ನು ತೆರೆಯಲಾಗಿದೆ ಎಂದು ವಿವರಿಸಿದರು.

ನಮ್ಮ ತಂದೆಯವರು ಬಹಳ ಕಷ್ಟಪಟ್ಟು ಕಂಪನಿ ಕಟ್ಟಿದ್ದಾರೆ. ಇದೀಗ ಲಾಜಿಸ್ಟಿಕ್, ಟ್ರಾವೆಲ್ಸ್ ಮತ್ತು ಮಾಧ್ಯಮ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ. ನಮ್ಮದ್ದು ಪ್ಯಾನ್ ಇಂಡಿಯಾ ಕಂಪನಿ. ವಿಆರ್‌ಎಲ್ ಲಾಜಿಸ್ಟಕ್ ಕಂಪನಿವೊಂದಕ್ಕೆ ಜಿಎಸ್‌ಟಿ ನೋಂದಾಯಿತ ಗ್ರಾಹಕರ ಸಂಖ್ಯೆಯೇ 9 ಲಕ್ಷ. ಕೃಷಿ ಉತ್ಪನ್ನಗಳು, ಬಟ್ಟೆ, ಟಯರ್, ಅಗರಬತ್ತಿ ಸೇರಿದಂತೆ ಇನ್ನಿತರ ವಸ್ತುಗಳ ಉತ್ಪಾದನೆ ಮಾಡುವ ನಮ್ಮ ಗ್ರಾಹಕರು ದೇಶಾದ್ಯಂತ ವಿಸ್ತಾರ ಹರಡಿಕೊಂಡಿದ್ದಾರೆ. ಇದುವೇ ಕಂಪನಿ ಬಲ ಎಂದರು.

‘ಆರ್ಥಿಕ ಶಿಸ್ತು ನಮ್ಮ ಕಂಪನಿಯ ಯಶಸ್ವಿಯ ಮತ್ತೊಂದು ಸೂತ್ರ. 48 ವರ್ಷದಲ್ಲಿ ಒಂದೇ ಒಂದು ಚೆಕ್ ಬೌನ್ಸ್ ಆಗಿಲ್ಲ’ ಎಂದಾಗ ಸಭಿಕರಿಂದ ಮೆಚ್ಚುಗೆ ಚಪ್ಪಾಳೆ ಹೊರಹೊಮ್ಮಿತು. ನಮ್ಮ ಕಂಪನಿಗೆ ಒಮ್ಮೆ ಸೇರ್ಪಡೆಗೊಂಡ ಉದ್ಯೋಗಿ ಕೆಲಸ ಬಿಡಲ್ಲ. 2-3 ವರ್ಷದಲ್ಲೇ ಕೆಲಸ ತ್ಯಜಿಸುವ ಉದ್ಯೋಗಿಗಳ ಪ್ರಮಾಣ ಯುರೋಪಿನಲ್ಲಿ ಶೇ.30, ಅಮೆರಿಕದಲ್ಲಿ ಶೇ.40, ಭಾರತದಲ್ಲಿ ಶೇ.24ರಷ್ಟಿದೆ. ಆದರೆ, ನಮ್ಮ ಸಂಸ್ಥೆಯಲ್ಲಿ ಈ ಪ್ರಮಾಣ ಶೇ.1ರಷ್ಟಿದೆ. ನಮ್ಮಲ್ಲಿ 12 ಸಾವಿರ ಲಾರಿ ಚಾಲಕರಿದ್ದಾರೆ. ಅವರಿಗೆ ವಿಮೆ, ಪಿಎಫ್, ಇಎಸ್‌ಐ ಸೇರಿದಂತೆ ಅಗತ್ಯ ಸೌಲಭ್ಯಗಳ ಮೂಲಕ ಅವರಿಗೆ ಭದ್ರತೆ ಮತ್ತು ಸುರಕ್ಷತೆ ಕಲ್ಪಿಸಿಕೊಡಲಾಗಿದೆ ಎಂದರು.

ಚಿಕ್ಕ ವಯಸ್ಸಿನಲ್ಲೇ ತಂದೆಯೊಂದಿಗೆ ಕೆಲಸ ಮಾಡಲು ಶುರು ಮಾಡಿದೆ. ಬಸ್, ಲಾರಿಯ ತಳಭಾಗದಲ್ಲಿ ಹೋಗಿ ಕೆಲಸವನ್ನು ಕರಗತ ಮಾಡಿಕೊಂಡೆ. ಇದೀಗ ನನ್ನ ಮಗ ಶಿವ ಸಂಕೇಶ್ವರ ಅವರು ವಿಜಯಾನಂದ ಟ್ರಾವೆಲ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಕೈಜೋಡಿಸಿದ್ದಾರೆ. ನನ್ನ ಪತ್ನಿ ವಾಣಿ ಸಹ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುವ ಮೂಲಕ ಬಲ ತುಂಬಿದ್ದಾರೆ ಎಂದರು.

ದಿನವೊಂದಕ್ಕೆ ಬಸ್, ಲಾರಿಗಳ 150 ಟಯರ್ ಬದಲಾಯಿಸಲಾಗುತ್ತದೆ. ಇದರ ತಿಂಗಳ ಖರ್ಚು 10 ಕೋಟಿ ರೂ. ಆಗಿದೆ. ಹಳೇ ಟಯರ್‌ಗಳನ್ನು ನಾನು, ನನ್ನ ಮಗ ಅಥವಾ ನನ್ನ ತಂದೆ ಮುಂದೆ ನಿಂತು ಮಾರಾಟ ಮಾಡುತ್ತೇವೆ. ಕೆಲಸದಲ್ಲಿ ಸಣ್ಣದು, ದೊಡ್ಡದು ಇರಲ್ಲ. ಎಲ್ಲ ಕೆಲಸವನ್ನೂ ಮಾಡಬೇಕು ಎಂದರು.

1996ರಲ್ಲಿ ವಿಆರ್‌ಎಲ್ ಬಸ್ ಕಾರ್ಯಾಚರಣೆ ಶುರು ಮಾಡಲಾಯಿತು. ಇದೀಗ ಕರ್ನಾಟಕ ಸೇರಿದಂತೆ ಆರು ರಾಜ್ಯಗಳಲ್ಲಿ ಬಸ್ ಸೇವೆ ನೀಡಲಾಗುತ್ತಿದೆ. ನಿತ್ಯ 12 ಲಕ್ಷ ಪ್ರಯಾಣಿಕರು ನಮ್ಮ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದರು.

ಮಾಧ್ಯಮ ಕ್ಷೇತ್ರದ ಸಾಧನೆಯನ್ನು ವಿವರಿಸಿದ ಅವರು, 1999ರಲ್ಲಿ ವಿಜಯಕರ್ನಾಟಕ ಪತ್ರಿಕೆಯನ್ನು ಪ್ರಾರಂಭಿಸಲಾಯಿತು. ಅನ್ಯ ಕಾರಣಕ್ಕಾಗಿ 2006ರಲ್ಲಿ ಅದನ್ನು ಮಾರಾಟ ಮಾಡಲಾಯಿತು. 2012ರಲ್ಲಿ ‘ವಿಜಯವಾಣಿ’ ದಿನಪತ್ರಿಕೆಯನ್ನು ಶುರು ಮಾಡಲಾಯಿತು. ಹಳೇ ಪತ್ರಿಕೆಯನ್ನು ನಂಬರ್ ಒನ್ ಮಾಡಲು 40 ತಿಂಗಳು ತೆಗೆದುಕೊಳ್ಳಲಾಯಿತು. ‘ವಿಜಯವಾಣಿ’ ಪತ್ರಿಕೆಯನ್ನು ನಂಬರ್ ಒನ್ ಕೇವಲ 20 ತಿಂಗಳು ತೆಗೆದುಕೊಳ್ಳಲಾಯಿತು ಎಂದರು.

ಲಾರಿ ಚಾಲಕರ ಕೊರತೆ ಸಮಸ್ಯೆ ನಿವಾರಣೆ ಮಾಡಿದ ಘಟನೆಯನ್ನು ಸಭಿಕರೊಂದಿಗೆ ಹಂಚಿಕೊಂಡ ಅವರು, ಒಮ್ಮೆ ಯೂರೋಪ್ ಪ್ರವಾಸಕ್ಕೆ ಹೋದಾಗ ‘ಚಾಲಕರು ಬೇಕಾಗಿದ್ದಾರೆ’ ಎಂಬ ಫಲಕ ಗಮನಿಸಿದೆ. ಇದೇ ರೀತಿ ನಮ್ಮ ಲಾರಿಗಳ ಮೇಲೆ ಫಲಕ ಹಾಕಿಸಿದೆ. ಅದರಲ್ಲಿ ನಮೂದಿಸಿದ ದೂರವಾಣಿ ಸಂಖ್ಯೆಗೆ ಸಾವಿರಾರು ಕರೆಗಳು ಬರಲು ಶುರುವಾಯಿತು. ಅದು ಈಗಲೂ ನಿಂತಿಲ್ಲ. ಮೊದಲು 2,500 ಲಾರಿಗಳ ಪೈಕಿ ಚಾಲಕ ಅಲಭ್ಯತೆಯಿಂದ 500 ರಿಂದ 520 ಲಾರಿ ಹಾಗೆ ನಿಂತುಕೊಳ್ಳುತ್ತಿದ್ದವು. ಅದೀಗ 6,200 ಲಾರಿಗಳ ಪೈಕಿ ಕೇವಲ 30ರಿಂದ 40 ಲಾರಿಗಳಷ್ಟೇ ನಿಂತುಕೊಳ್ಳುತ್ತಿವೆ ಎಂದರು.

ವೆಚ್ಚ ಕಡಿತಕ್ಕೆ ನಿದರ್ಶನ ನೀಡಿದ ಆನಂದ ಸಂಕೇಶ್ವರ ಅವರು, ಕಚೇರಿಗೆ ಬರುವ ಒಂದು ಕವರ್ ಅನ್ನು 8 ಬಾರಿ ಬಳಕೆ ಮಾಡಲಾಗುತ್ತದೆ. ಇಂತಹ ಸಣ್ಣ ವಿಚಾರಗಳೂ ವೆಚ್ಚವನ್ನು ಕಡಿತಗೊಳಿಸುತ್ತವೆ. ಉದ್ದಿಮೆದಾರರು ಇದನ್ನೆಲ್ಲವನ್ನೂ ಗಮನಿಸಬೇಕು ಎಂದು ಕಿವಿಮಾತು ಹೇಳಿದರು. ಪಾಲಕರ ಮಾತು ಕೇಳಿ

ನನ್ನ ತಂದೆಯವರ ಸೂಚನೆ, ಅವರ ಮಾತು ಕೇಳಿದ್ದರಿಂದ ನಾನು ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು. ಆದರೀಗ ಯುವ ಜನರು ಸಣ್ಣ ವಿಷಯಕ್ಕೂ ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ. ಪಾಲಕರ ಮಾತು ಕೇಳಿ. ಅವರು ಹೇಳುವುದು ನಿಮ್ಮ ಒಳ್ಳೆಯದ್ದಕ್ಕೆ ಮತ್ತು ಉತ್ತಮ ಭವಿಷ್ಯಕ್ಕಾಗಿ ಎಂದು ಯುವಜನರಿಗೆ ಕಿವಿಮಾತು ಹೇಳಿದರು.

ಸರ್ಕಾರಿ ನಿಯಮ ಪಾಲಿಸಿ

ಉದ್ದಿಮೆದಾರರು ಸರ್ಕಾರದ ನಿಯಮಗಳನ್ನು ಪಾಲನೆ ಮಾಡಲೇಬೇಕು. ಈ ವಿಷಯದಲ್ಲಿ ನಾವು ಶಿಸ್ತು ಬೆಳೆಸಿಕೊಂಡಿದ್ದೇವೆ. ಉದಾಹರಣೆಗೆ, ವ್ಹೀಲ್ ಟ್ಯಾಕ್ಸ್ ಪ್ರತಿ ತಿಂಗಳ 15ರೊಳಗೆ ತುಂಬಬೇಕು. ಇಲ್ಲವಾದರೆ, ದಂಡ ದುಪ್ಪಟ್ಟು ಆಗಲಿದೆ. ಇದಕ್ಕಾಗಿ ನಮ್ಮ 2 ಕಂಪನಿಯಿಂದ ತಿಂಗಳಿಗೆ 15 ಕೋಟಿ ರೂ. ಪಾವತಿಸಲಾಗುತ್ತಿದೆ. ದಿನವೊಂದಕ್ಕೆ ಲಾರಿಗಳಿಂದ 70 ಲಕ್ಷ ರೂ., ಬಸ್‌ಗಳಿಂದ 10 ಲಕ್ಷ ರೂ. ಟೋಲ್ ಕಟ್ಟಲಾಗುತ್ತದೆ ಎಂದು ವಿವರಿಸಿದರು.

ಬರಲಿದ್ದಾರೆ ಲೇಡಿ ಡ್ರೈವರ್

ನಮ್ಮ ಕಂಪನಿಯ ಲಾರಿಗಳಿಗೆ ಬರೀ ಪುರುಷ ಚಾಲಕರಿದ್ದಾರೆ. ಮುಂದಿನ ದಿನಗಳಲ್ಲಿ ಮಹಿಳಾ ಚಾಲಕಿಯರು ಬರಲಿದ್ದಾರೆ. ನಮ್ಮ ಲಘು ವಿಮಾನಕ್ಕೆ ಇಬ್ಬರು ಮಹಿಳಾ ಪೈಲಟ್‌ಗಳಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗುತ್ತಿದೆ ಎಂದು ಆನಂದ ಸಂಕೇಶ್ವರ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net