

ಕಲಬುರಗಿ: ದೊಡ್ಡ ದೊಡ್ಡ ನಾಯಕರು, ಮುಖಂಡರು ಬಂದರೂ ಸಹ ಕಲಬುರಗಿ ಕ್ಷೇತ್ರದ ೬.೨೦ ಲಕ್ಷ ಮತದಾರರು ನನ್ನ ಜತೆಗೆ ನಿಂತ್ತಿದ್ದಾರೆ. ಗೆದ್ದು ಸೋತ್ತಿದ್ದು, ಕ್ಷೇತ್ರದ ಜನರ ಜತೆಗೆ ಸದಾ ಇರುತ್ತೇನೆ ಎಂದು ಮಾಜಿ ಸಂಸದ ಡಾ.ಉಮೇಶ ಜಾಧವ್ ಹೇಳಿದರು.
ನಗರದ ಹಿಂದಿ ಪ್ರಚಾರ ಸಭಾದ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಕಾಮನ್‌ಸೆನ್ಸ್ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಇನ್ನು ಸ್ವಲ್ಪ ಪ್ರಯತ್ನಿಸಿದರೆ ಗೆಲುವು ನಿಶ್ಚಿತವಾಗಿತ್ತು. ಇದೀಗ ಹೊಸ ಪ್ರಯತ್ನ, ಜೀವನ ಆರಂಭವಾಗಿದೆ. ಕ್ಷೇತ್ರದಲ್ಲಿಯೇ ಇದ್ದು, ಜನರ ಸೇವೆ ಮುಂದುವರಿಸುತ್ತೇನೆ ಎಂದು ಹೇಳಿದರು.
ನನ್ನ ಗುರುಗಳಾಗಿದ್ದ ಧರ್ಮಸಿಂಗ್ ಅವರು ಮುಖ್ಯಮಂತ್ರಿ ಆಗಲು ಅವರಲ್ಲಿನ ಅಗಾಧವಾದ ಸಾಮಾನ್ಯ ಜ್ಞಾನ ಕಾರಣ. ಶಿಕ್ಷಿತರಿಗಿಂತ ಹಳ್ಳಿಗಳಲ್ಲಿ ಇರುವ ಅನಕ್ಷರಸ್ಥರಿಗೆ ಹೆಚ್ಚಿನ ಕಾಮನ್‌ಸೆನ್ಸ್ ಇರುತ್ತದೆ. ಯಾರಾದರೂ ಸತ್ತರೆ ಅವರ ಮನೆಗೆ ಹೋಗಿ, ಸಾಂತ್ವಾನ ಹೇಳಿ, ಕುಟುಂಬದ ಜತೆಗೆ ನಿಲ್ಲುವ ಪ್ರವೃತ್ತಿ ಹಳ್ಳಿಗಳಲ್ಲಿ ಇದೆ ಎಂದರು.
ಲೋಕಸಭೆ ಚುನಾವಣೆ ಫಲಿತಾಂಶ ನಂತರ ಮೊದಲ ಬಾರಿಗೆ ಕಾಮನ್‌ಸೆನ್ಸ್ನಂತ ಅರ್ಥಪೂರ್ಣ ಪುಸ್ತಕ ಬಿಡುಗಡೆಯ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಇಂದು ಬಿಜೆಪಿಯ ಹಿರಿಯರಾದ ಜಗನ್ನಾಥರಾವ ಜೋಶಿ ಅವರ ಜಯಂತಿ, ಶಾಮಾ ಪ್ರಸಾದ ಮುಖರ್ಜಿ ಅವರ ಸ್ಮÊತಿ ದಿನವಿದ್ದು, ಹೊಸ ಭರವಸೆ, ನಿರೀಕ್ಷೆಯೊಂದಿಗೆ ಜನರ ಮಧ್ಯೆ ಸಾಗುತ್ತೇನೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ ಮಾತನಾಡಿ, ಸಾಮಾನ್ಯ ಪ್ರಜ್ಞೆ ಇದ್ದರೆ ಮನುಷ್ಯನಿಗೆ ಬೇರೆ ಏನೂ ಬೇಕಾಗಿಲ್ಲ. ಸಮಯಕ್ಕೆ ಅನುಗುಣವಾಗಿ ಇರಬೇಕು. ಬರೆಯುವ ಹವ್ಯಾಸ ಎಲ್ಲರಿಗೂ ಬರುವುದಿಲ್ಲ. ಕಾಮನ್‌ಸೆನ್ಸ್ ವಿಷಯದ ಬಗ್ಗೆ ಬರೆಯುವುದು ಸರಳ ಮಾತಲ್ಲ. ಕೃತಕ ಬುದ್ಧಿಮತ್ತೆಯ ಇಂತಹ ಸಂದಿಗ್ಧ ಕಾಲದಲ್ಲಿ ಮನುಷ್ಯನ ಅಗತ್ಯ ಇದೆಯಾ ಎಂಬ ದಿನಗಳು ಸೃಷ್ಟಿಯಾಗಿವೆ. ಇದರ ಮಧ್ಯೆ ಕಾಮನ್‌ಸೆನ್ಸ್ನಂತ ಕೃತಿ ರಚಿಸಿ, ಉತ್ತಮ ಸಂದೇಶವನ್ನು ನೀಡುವ ಕೆಲಸ ಅತ್ಯುತ್ತಮವಾದದ್ದು ಎಂದು ಹೇಳಿದರು.
ಬೀದರ್ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಮಾತನಾಡಿ, ಆಸ್ತಿ, ತೋಳ್ಬಲ ಇದ್ದವರು ಊರನ್ನು ಆಳಬಹುದು ಎಂಬ ಕಾಲವಿತ್ತು. ಪ್ರಸ್ತುತ ಜ್ಞಾನದ ಬಲ ಇದ್ದವರೂ ಮಾತ್ರ ದೇಶವನ್ನು ಆಳಬಹುದು ಎಂಬುದು ಸಾಬೀತಾಗಿದೆ. ಬರೀ ವಿದ್ಯಾವಂತರಲ್ಲ ಬುದ್ಧಿವಂತರೂ ಇರಬೇಕು. ಮನಮೋಹನ್ ಸಿಂಗ್ ಅತ್ಯುತ್ತಮ ಆರ್ಥಿಕ ತಜ್ಞರು, ವಿದೇಶಾಂಗ ಸಚಿವರಾಗಿ ಯಶಸ್ವಿ ಕಾರ್ಯ ನಿರ್ವಹಿಸಿದರು. ಆದರೆ ಪ್ರಧಾನಿಯಾಗಿ ವಿಫಲರಾದರು. ಮೋದಿ ಅವರ ಸಾಮಾನ್ಯ ಜ್ಞಾನದ ಬಲದಿಂದ ದೇಶ ಪ್ರಗತಿಯ ಪಥದಲ್ಲಿ ಸಾಗುತ್ತಿದೆ ಎಂದು ಹೇಳಿದರು.
ನಾಮದೇವ ಜಾಧವ್ ಪುಸ್ತಕ ಪರಿಚಯಿಸಿದರು. ಶಾಸಕ ಡಾ.ಅವಿನಾಶ ಜಾಧವ್, ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ್, ಪ್ರಮುಖರಾದ ಶರಣಪ್ಪ ತಳವಾರ, ಅವ್ವಣ್ಣ ಮ್ಯಾಕೇರಿ, ಕಾಶೀನಾಥ ಪಾಟೀಲ್, ಪ್ರಭಾಕರ ಜೋಶಿ, ಡಾ.ಆನಂದ ಸಿದ್ದಮಣಿ, ವೀರು ಪಾಟೀಲ್, ಸುಭಾಷ ರಾಠೋಡ್, ಸದಾನಂದ ಪೆರ್ಲ, ಸಂಗಪ್ಪ ಕುಂಬಾರ ಇತರರಿದ್ದರು.