ಗೃಹೋಪಯೋಗಿ ಉತ್ಪನ್ನ ತಯಾರಿಸಿ

CHR sanjj
ಚೌಳಹಿರಿಯೂರು ಗ್ರಾಪಂನಲ್ಲಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಸಭೆ ಮತ್ತು ಮಹಿಳಾ ವಿಶೇಷ ಗ್ರಾಮಸಭೆಯನ್ನು ಗ್ರಾಪಂ ಅಧ್ಯಕ್ಷೆ ಸುಧಾ ಉದ್ಘಾಟಿಸಿದರು. ವೀಣಾ ಪ್ರಭು, ಲೋಕೇಶ್, ವಿನಯ್, ಸೌಮ್ಯಾ, ಶೋಭಾ ಇತರರಿದ್ದರು.
Published on

ಚೌಳಹಿರಿಯೂರು: ಸಂಘಗಳಲ್ಲಿ ಸಾಲ ಪಡೆದು ಬಡ್ಡಿ ಕಟ್ಟುವುದರ ಬದಲಿಗೆ ಮನೆ ಬಳಕೆ ವಸ್ತುಗಳನ್ನು ತಯಾರಿಸಿ ಸಭೆ, ಸಮಾರಂಭಗಳಿಗೆ ಮಾರಾಟ ಮಾಡುವುದರಿಂದ ಹೆಚ್ಚು ಲಾಭ ಗಳಿಸಬಹುದು ಎಂದು ಕಡೂರು ತಾಲೂಕು ಸಂಜೀವಿನಿ ಒಕ್ಕೂಟಗಳ ಮೇಲ್ವಿಚಾರಕ ಲೋಕೇಶ್ ತಿಳಿಸಿದರು.

ಗ್ರಾಪಂ ಸಂಜೀವಿನಿ ಒಕ್ಕೂಟದ ವಾರ್ಷಿಕ ಸಭೆ ಮತ್ತು ಮಹಿಳಾ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿ, ಚೌಳಹಿರಿಯೂರಿನಲ್ಲಿ ಒಕ್ಕೂಟ ಪ್ರಾರಂಭವಾಗಿ ನಾಲ್ಕು ವರ್ಷ ಕಳೆದಿದೆ. ಗ್ರಾಮದ 5 ವಾರ್ಡ್‌ಗಳ 41 ಸಂಘಗಳು ಉತ್ತಮವಾಗಿ ಕಾರ್ಯಕ್ರಮ ನಡೆಸುತ್ತಿವೆ ಎಂದರು.

ಗ್ರಾಪಂ ಕಾರ್ಯದರ್ಶಿ ವಿನಯ್ ಮಾತನಾಡಿ, ಎನ್‌ಆರ್‌ಇಜಿಯಿಂದ ವೈಯಕ್ತಿಕ ಸೌಲಭ್ಯಗಳಾದ ಕೊಟ್ಟಿಗೆ, ಹೈನುಗಾರಿಕೆ, ಬಚ್ಚಲುಗುಂಡಿ ನಿರ್ಮಿಸಿಕೊಳ್ಳುವವರು ನ.2ರವರೆಗೆ ಅರ್ಜಿ ಸಲ್ಲಿಸಬಹುದು. ಸಂಘದ ಸದಸ್ಯರು ಕಂದಾಯ ವಸೂಲಾತಿ ಮಾಡಿ ಕೊಡುವುದಾದರೆ ಶೇ.5ರಷ್ಟು ಗೌರವಧನ ಕೊಡಲಾಗುತ್ತದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಎಂ.ಬಿ.ಕೆ.ಶಾರದಮ್ಮ ಮಾತನಾಡಿ, ಕಳೆದ ವರ್ಷ 27 ಲಕ್ಷ ರೂ. ವಹಿವಾಟು ನಡೆಸಿ ಸೇವಾ ಶುಲ್ಕದಿಂದ 2,09,924 ರೂ. ಸಂಗ್ರಹಿಸಲಾಗಿದೆ. 23490 ರೂ. ವೆಚ್ಚ ಮಾಡಿ 1,86,433 ರೂ. ಲಾಭ ಗಳಿಸಲಾಗಿದೆ ಎಂದರು.

ಒಕ್ಕೂಟದ ಅಧ್ಯಕ್ಷೆ ಎಂ.ವೀಣಾ ಪ್ರಭು ಮಾತನಾಡಿ, ಎಲ್ಲ ಸಂಘಗಳೂ ಬ್ಯಾಂಕ್ ಮುಖಾಂತರವೇ ವ್ಯವಹಾರ ನಡೆಸಬೇಕೆಂದು ತಿಳಿಸಿದರು. ತುರ್ತಾಗಿ ಸಂಜೀವಿನಿ ಶೆಡ್ ನಿರ್ಮಿಸಲು ನಿವೇಶನ ಮತ್ತು ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದರು.

ಗ್ರಾಪಂ ಅಧ್ಯಕ್ಷೆ ಸುಧಾ ದೇವರಾಜ್, ಸಂಪನ್ಮೂಲ ವ್ಯಕ್ತಿಗಳಾದ ನಿರಂಜನ್, ರೇಖಾ, ಸಿಬ್ಬಂದಿ ಸೌಮ್ಯಾ, ಶೋಭಾ, ಪಶು ಸಖಿ ಬಿ.ಸಿ.ಶೈಲಾ, ಜಿ.ಎ.ನಾಗರತ್ನಾ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಒಕ್ಕೂಟದ ಪದಾಧಿಕಾರಿಗಳು, ತ್ಯಾಜ್ಯ ವಿಲೇವಾರಿ ವಾಹನ ಚಾಲಕಿ ಅನುಪಮಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net