ಗೃಹಿಣಿ ಸಾವು ಆತ್ಮಹತ್ಯೆಯಲ್ಲ ಕೊಲೆ:ಸಂಬಂಧಿಕರ ಆರೋಪ

07-murder3
Published on

ಹಾಸನ: ಶ್ರವಣಬೆಳಗೊಳ ಹೋಬಳಿಯ ಉಳಿಗೆರೆ ಗ್ರಾಮದ ಸಂಗೀತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಆತ್ಮಹತ್ಯೆಯಲ್ಲಿ ವರದಕ್ಷಿಣೆಗಾಗಿ ಗಂಡನ ಮನೆಯವರು ಮಾಡಿರುವ ಕೊಲೆ ಎಂದು ಆರೋಪಿಸಿ ಸಂಗೀತಾ ಸಂಬಂಧಿಕರು ಶನಿವಾರ ನಗರದ ಸರ್ಕಾರಿ ಆಸ್ಪತ್ರೆ ಶವಾಗಾರದ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.
ಕೃಷ್ಣರಾಜಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ನಾಟನಹಳ್ಳಿ ಗ್ರಾಮದ ಸಂಗೀತಾ ಕಳೆದ ನಾಲ್ಕು ವರ್ಷಗಳ ಹಿಂದೆ ಉಳಿಗೆರೆ ಗ್ರಾಮದ ಕಿರಣ್ ಎಂಬಾತ ಪ್ರೀತಿಸಿ ಆಕೆಯನ್ನು ಮದುವೆಯಾಗಿದ್ದ. ದಂಪತಿಗೆ ಮೂರು ವರ್ಷದ ಸಂಕೇತ್ ಎಂಬ ಗಂಡು ಮಗುವಿದೆ. ಶನಿವಾರ ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗಂಡನ ಮನೆಯವರು ಹೇಳಿದ್ದಾರೆ. ಆದರೆ, ಸಂಗೀತಾ ಮೇಲೆ ದೈಹಿಕ ಹಲ್ಲೆ ಮಾಡಿ ಕೊಲೆ ಮಾಡಿ ಬಳಿಕ ನೇಣು ಬಿಗಿದಿದ್ದಾರೆ. ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದು ಆಗ್ರಹಿಸಿ ನಾಟನಹಳ್ಳಿ ಗ್ರಾಮಸ್ಥರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದ ಮುಂಭಾಗ ಆರೋಪ ಮಾಡಿದರು.
ದೇಹದ ಮೇಲೆ ಗಾಯದ ಕಲೆಗಳಿವೆ. ಇದು ಆತ್ಮಹತ್ಯೆಯಲ್ಲ ಬದಲಾಗಿ ಪತಿ ಕಿರಣ್, ಮಾವ ಧರ್ಮೇಗೌಡ, ಅತ್ತೆ ಗೌರಮ್ಮ ಸೇರಿದಂತೆ ಅವರ ಕುಟುಂಬ ಸದಸ್ಯರು ದೈಹಿಕವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಕೂಡಲೇ ಇವರನ್ನು ಬಂಧಿಸಬೇಕು ಎಂದು ಮೃತ ಸಂಗೀತಾ ಅವರ ಪೋಷಕರು ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net