

ಮೈಸೂರು: ವರದಕ್ಷಿಣೆಗೋಸ್ಕರ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಗೃಹಿಣಿಯ ಆತ್ಮಹತ್ಯೆಗೆ ಕಾರಣಕರ್ತರಾದ ಕುಟುಂಬದವರಿಗೆ ನಗರದ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೋಮವಾರ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನಂಜನಗೂಡು ತಾಲೂಕಿನ ತುಂಬುನೇರಳೆ ಗ್ರಾಮದ ನಿವಾಸಿಗಳಾದ ಸಿದ್ದರಾಜು, ಆತನ ತಾಯಿ ಜಯಮ್ಮ, ಸಹೋದರಿಯರಾದ ಸುಮಾ ಮತ್ತು ಐಶ್ವರ್ಯ ಶಿಕ್ಷೆಗೆ ಗುರಿಯಾದವರು. ತುಂಬುನೇರಳೆಯ ಸಿದ್ದರಾಜು ಹಾಗೂ ಬಿಳಿಗೆರೆಯ ಬಸವನಾಯಕ ಪುತ್ರಿ ಪುಷ್ಪಮಾಲ ಅವರ ವಿವಾಹ 30-5-2012ರಲ್ಲಿ ನಡೆಯಿತು.
ವಿವಾಹ ಸಂದರ್ಭ ವರದಕ್ಷಿಣೆಯಾಗಿ 1 ಲಕ್ಷ ರೂ. ನಗದು, ಮದುವೆ ವೆಚ್ಚವಾಗಿ 1 ಲಕ್ಷ ರೂ. ನೀಡಲಾಗಿತ್ತು. ವಿವಾಹ ನಂತರ ಮತ್ತಷ್ಟು ವರದಕ್ಷಿಣೆ ತರುವಂತೆ ಸಿದ್ದರಾಜು ಹಾಗೂ ಮನೆಯವರು ಕಿರುಕುಳ ನೀಡಲು ಪ್ರಾರಂಭಿಸಿದರು. ಮೈಸೂರಿನಲ್ಲಿ ನಿವೇಶನ ಖರೀದಿಸಲು 1 ಲಕ್ಷ ರೂ.ಗಳನ್ನು ತವರು ಮನೆಯಿಂದ ತರುವಂತೆ ಪುಷ್ಪಮಾಲ ಅವರಿಗೆ ಗಂಡನ ಮನೆಯವರು ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದರು. ಇದರಿಂದ ಬೇಸತ್ತ ಪುಷ್ಪಮಾಲ ಅವರು ತವರು ಮನೆಗೆ ಗೌರಿ ಹಬ್ಬಕ್ಕೆಂದು ಆಗಮಿಸಿ 4-11-2014 ರಂದು ನೇಣುಬಿಗಿದು ಆತ್ಮಹತ್ಯೆ ಮಾಡಕೊಂಡರು.
ಐಪಿಸಿ ಕಲಂ 304(ಬಿ) (ವರದಕ್ಷಿಣೆ ಕಿರುಕುಳದಿಂದ ಸಾವು) ಅಪರಾಧಕ್ಕೆ 9 ವರ್ಷಗಳ ಕಠಿಣ ಶಿಕ್ಷೆ ಹಾಗೂ ತಲಾ 5 ಸಾವಿರ ರೂ. ದಂಡ ವಿಧಿಸಲಾಗಿದೆ. ಐಪಿಸಿ ಕಲಂ 498 (ಎ) (ಮಹಿಳೆಯನ್ನು ಕ್ರೌರ್ಯಕ್ಕೆ ಒಳಪಡಿಸುವುದು) ಅಪರಾಧಕ್ಕೆ 2 ವರ್ಷಗಳ ಕಠಿಣ ಶಿಕ್ಷೆ, 2 ಸಾವಿರ ರೂ. ದಂಡ, ವರದಕ್ಷಿಣೆ ನಿಷೇಧ ಕಾಯ್ದೆಯ ಕಲಂ.4ರ ಅಪರಾಧಕ್ಕೆ 1 ವರ್ಷ ಶಿಕ್ಷೆ ಹಾಗೂ ತಲಾ 3,000 ರೂ. ದಂಡ ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆ ಕಲಂ.5ರ ಅಪರಾಧಕ್ಕೆ 5 ವರ್ಷ ಶಿಕ್ಷೆ ಹಾಗೂ ತಲಾ 15,000 ರೂ. ದಂಡವನ್ನು ವಿಧಿಸಿ ನ್ಯಾಯಾಧೀಶರಾದ ಮಲ್ಲಿಕಾರ್ಜುನ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ನಾಗಪ್ಪ ಸಿ. ನಾಕಮನ್ ವಾದಿಸಿದರು.