ಗೃಹಲಕ್ಷ್ಮೀಗೆ ಸರ್ವರ್ ಸಮಸ್ಯೆ

25 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆ ಫಲಾನುಭವಿಯಾಗಲು ಮನೆ ಒಡತಿಯರು ಪರದಾಡುವಂತಾಗಿದೆ. ಮಂಗಳವಾರ ಬೆಳಗ್ಗೆಯಿಂದಲೇ ಹು-ಧಾ ಒನ್ ಕೇಂದ್ರದಲ್ಲಿ ಸರತಿ ಸಾಲಿನಲ್ಲಿ ನಿಂತ ಮಹಿಳೆಯರಿಗೆ ಸರ್ವರ್ ಸಮಸ್ಯೆಯಿಂದ ನಿರಾಸೆ ಉಂಟಾಗಿದೆ.
ಮಳೆ ಆರ್ಭಟವನ್ನೂ ಲೆಕ್ಕಿಸದೆ ಉದಯ ಹಾಸ್ಟೇಲ್ ಬಳಿಯ ಹು-ಧಾ ಒನ್ ಕೇಂದ್ರಕ್ಕೆ ಆಗಮಿಸಿದ್ದ ನೂರಾರು ಮಹಿಳೆಯರು ಕೊಡೆ ಹಿಡಿದೇ ಸಾಲಿನಲ್ಲಿ ನಿಂತಿದ್ದರು. ಕೇಂದ್ರದಲ್ಲಿನ ಎರಡು ಕೌಂಟರ್‌ಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭಿಸಿರುವ ಸಿಬ್ಬಂದಿ, ದಿನಕ್ಕೆ ನೂರು ಜನರಿಗೆ ಟೋಕನ್ ನೀಡಿ ನೋಂದಣಿಗೆ ಅವಕಾಶ ಕಲ್ಪಿಸಿದ್ದಾರೆ.
ಮುಂಚಿತವಾಗಿ ಟೋಕನ್ ಪಡೆದ ನೂರು ಮಹಿಳೆಯರಿಗೆ ಮಾತ್ರ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಿದ್ದರಿಂದ ಬಹುತೇಕರು ನಿರಾಸೆಯಿಂದ ಮರಳುವಂತಾಗಿತ್ತು. ಇನ್ನು ನೋಂದಣಿ ಸಮಯದಲ್ಲಿ ಸರ್ವರ್ ಪದೇ ಪದೇ ಕೈಕೊಟ್ಟಿದ್ದರಿಂದ ಪ್ರಕ್ರಿಯೆ ನಿಧಾನ ಗತಿಯಲ್ಲಿ ಸಾಗಿತ್ತು. ಇದರಿಂದ ಬೇಸತ್ತ ಮಹಿಳೆಯರು ಸಿಬ್ಬಂದಿ ಜತೆ ವಾಗ್ವಾದ ಸಹ ನಡೆಸಿದರು.
ಕೇಂದ್ರದಲ್ಲಿ ನಿಲ್ಲಲು ಸರಿಯಾದ ಜಾಗ ಇಲ್ಲ. ಮಳೆ ಇದ್ದರೂ ನೋಂದಣಿ ವಿಳಂಬವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ವರ್ ಸಮಸ್ಯೆಯಿಂದ ವಿಳಂಬವಾಗುತ್ತಿದೆ ಎಂದು ಸಿಬ್ಬಂದಿ ಸಮಜಾಯಿಷಿ ನೀಡಿದರೂ ಮಹಿಳೆಯರು ಕೇಳುವ ಸ್ಥಿತಿಯಲ್ಲಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net