ಗೃಹಲಕ್ಷ್ಮೀಗಾಗಿ ಮುಂದುವರಿದ ಪರದಾಟ

Continued search for Grilahakshmi
ಗೊಳಸಂಗಿ ಗ್ರಾಮದ ಬಾಪೂಜಿ ಕೇಂದ್ರದಲ್ಲಿ ಆಧಾರ್ ಕಾರ್ಡ್‌ಗೆ ಮೊಬೈಲ್ ನೋಂದಣಿಗಾಗಿ ಮುಗಿಬಿದ್ದಿರುವ ಜನತೆ.
Published on

ಗೊಳಸಂಗಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆಗಳ ಸಾಫಲ್ಯಕ್ಕಾಗಿ ಗೊಳಸಂಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಕಳೆದ ಮೂರು ವಾರಗಳಿಂದ ಸ್ಥಳೀಯ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್ ಕೇಂದ್ರಗಳಿಗೆ ಪ್ರತಿನಿತ್ಯ ಪರದಾಡುವಂತ ದುಸ್ಥಿತಿ ಎದುರಾಗಿದೆ.

ಆಗಸ್ಟ್ ತಿಂಗಳಿನಿಂದ ಗೃಹಲಕ್ಷ್ಮೀ ಯೋಜನೆಯ 2 ಸಾವಿರ ರೂ. ಪಡೆಯಲೇಬೇಕೆಂದು ಈ ಭಾಗದ ಬಹುತೇಕ ಗ್ರಾಮದ ಮಹಿಳೆಯರು ಪರದಾಟ ನಡೆಸುತ್ತಿದ್ದಾರೆ. ಅದಕ್ಕಾಗಿ ಇದುವರೆಗೂ ಆಗಿರದೇ ಇದ್ದ ಮೊಬೈಲ್ ಮತ್ತು ಸ್ಥಳೀಯ ಬ್ಯಾಂಕ್‌ಗೆ ಆಧಾರ್ ಲಿಂಕ್, ಯಜಮಾನಿಕೆ ನೋಂದಣಿ, ಅರ್ಜಿ ಸಲ್ಲಿಕೆಗಾಗಿ ಸ್ಥಳೀಯ ಕೆನರಾ ಬ್ಯಾಂಕ್, ಗ್ರಾಮ ಪಂಚಾಯಿತಿ, ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್ ಕೇಂದ್ರಗಳಲ್ಲಿ ಕಳೆದ 2-3 ವಾರಗಳಿಂದ ಮಹಿಳೆಯರೂ ಸೇರಿದಂತೆ ಪುರುಷರು ಮುಗಿ ಬೀಳುತ್ತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ.
ದಿನಗೂಲಿಯನ್ನೇ ನಂಬಿ ನಿತ್ಯ ಉಸಿರು ಹಾಕುತ್ತಿದ್ದ ಬಹುತೇಕ ಜನತೆಗೆ ಈ ನೋಂದಣಿ ಕಾರ್ಯ ಕಬ್ಬಿಣದ ಕಡಲೆಯಂತೆ ಭಾಸವಾಗುತ್ತಿರುವುದು ವಾಸ್ತವಿಕ ಸತ್ಯ. ಓದು-ಬರಹ ಗೊತ್ತಿಲ್ಲದ ಜನಸಾಮಾನ್ಯ ಜನತೆಗೆ ಈ ಅರ್ಜಿ ಸಲ್ಲಿಕೆ ಬ್ರಹ್ಮಾಸ್ತ್ರವಾಗಿ ಕಾಡತೊಡಗಿದೆ. ಆದರೂ ದಿನದ ಕೂಲಿಯನ್ನು ಲೆಕ್ಕಿಸದೇ ನೋಂದಣಿ ಕಾರ್ಯದಲ್ಲಿ ಸುತ್ತಮುತ್ತಲಿನ ಹಳ್ಳಿಗರು ಮುಂದಾಗಿದ್ದಾರೆ.

ತಪ್ಪದ ಸರ್ವರ್ ಕಾಟ: ಆಧಾರ್‌ಗೆ ಮೊಬೈಲ್ ಲಿಂಕ್, ಬ್ಯಾಂಕ್ ಪಾಸ್‌ಬುಕ್‌ಗೆ ಆಧಾರ್-ಮೊಬೈಲ್ ಲಿಂಕ್, ಗೃಹಲಕ್ಷ್ಮೀಗೆ ಅರ್ಜಿ ಸಲ್ಲಿಕೆಗಾಗಿ ಗೊಳಸಂಗಿ, ಬುದ್ನಿ, ಮುಕಾರ್ತಿಹಾಳ, ಬೀರಲದಿನ್ನಿ, ಅಂಗಡಗೇರಿ, ತೆಲಗಿ, ಕೂಡಗಿ, ಮಸೂತಿ, ಮುತ್ತಗಿ, ನಾಗವಾಡ ಗ್ರಾಮಸ್ಥರೂ ಕೂಡ ಗೊಳಸಂಗಿ ಗ್ರಾಮದತ್ತ ಮುಖ ಮಾಡಿರುವುದು ಅಧಿಕ ಜನದಟ್ಟಣೆ ಉಂಟಾಗಿದೆ. ಇದಕ್ಕೆಲ್ಲ ಸರ್ವರ್ ಸಮಸ್ಯೆ ಪ್ರಮುಖ ಕಾರಣವಾಗಿದೆ.

ಆಧಾರ್‌ಕಾರ್ಡ್‌ಗೆ ಮೊಬೈಲ್ ನಂಬರ್ ನೋಂದಣಿಗಾಗಿ ಬೆಳಗ್ಗೆ ದೂರದ ಮಸೂತಿ ಗ್ರಾಮದಿಂದ ಬಂದಿದ್ದೇನೆ. ಆದರೆ ಮಧ್ಯಾಹ್ನವಾದರೂ ನನ್ನ ಸರದಿ ಬಂದಿಲ್ಲ. ಸಾಲದ್ದಕ್ಕೆ ಈ ಸರ್ವರ್ ಸಮಸ್ಯೆ ಕಾಡತೊಡಗಿದೆ. ಇದೆಲ್ಲವನ್ನೂ ಮುಗಿಸಿಕೊಂಡು ಬ್ಯಾಂಕ್ ಕಾಗದಗಳನ್ನು ಹೊಂದಿಸಿಕೊಂಡು ಅರ್ಜಿ ಸಲ್ಲಿಕೆ ಈ ತಿಂಗಳು ಆಗುತ್ತೊ ಇಲ್ಲವೊ ಗೊತ್ತಿಲ್ಲ ಸರ್.
ಸುನಿತಾ ಕಾಗಲ್, ಮಸೂತಿ ಗ್ರಾಮಸ್ಥೆ.

  • ಪೋಟೊ : ಜಿಎಲ್‌ಎಸ್ 26.1
    ಗೊಳಸಂಗಿ ಗ್ರಾಮದ ಬಾಪೂಜಿ ಕೇಂದ್ರದಲ್ಲಿ ಆಧಾರ್ ಕಾರ್ಡ್‌ಗೆ ಮೊಬೈಲ್ ನೋಂದಣಿಗಾಗಿ ಮುಗಿಬಿದ್ದಿರುವ ಜನತೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net