ಗೃಹಲಕ್ಷ್ಮೀ ಹಣ ಖಾತೆಗಳಿಗೆ ಜಮಾ 30ರಂದು

JLR ph3 Aug 21 Purvabavi sabe
Published on

ಜಗಳೂರು: ಗೃಹಲಕ್ಷ್ಮೀ ಯೋಜನೆಗೆ ಆ.30ರಂದು ಚಾಲನೆ ನೀಡಲಿದ್ದು, ತಾಲೂಕಿನ 22 ಗ್ರಾಪಂಗಳಲ್ಲೂ ಯಶಸ್ವಿಗೊಳಿಸಬೇಕು ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಪಿಡಿಒಗಳಿಗೆ ಸೂಚನೆ ನೀಡಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಗೃಹಲಕ್ಷ್ಮೀ ಯೋಜನೆ ಚಾಲನೆ ಹಿನ್ನೆಲೆ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರು ಯೋಜನೆಗೆ ಚಾಲನೆ ನೀಡಿ ರಾಜ್ಯದ ಎಲ್ಲ ಫಲಾನುಭವಿಗಳಿಗೆ ತಲಾ 2 ಸಾವಿರ ರೂ. ಗಳನ್ನು ಖಾತೆಗಳಿಗೆ ಜಮಾ ಮಾಡಲಿದ್ದಾರೆ ಎಂದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನ ಮತ್ತು ಗುರುಭವನ ಸೇರಿದಂತೆ ಎರಡು ಕಡೆ ಆ.30ರಂದು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಅಂದು ಸಾವಿರಾರು ಮಹಿಳೆಯರು ಸೇರಲಿದ್ದಾರೆ. ಆದ್ದರಿಂದ ಎಲ್‌ಇಡಿ ಪರದೆ ಅಳವಡಿಸಿ ನೇರ ಪ್ರಸಾರಕ್ಕೆ ಅವಕಾಶ ನೀಡಲು ಕ್ರಮ ಕೈಗೊಳ್ಳುವಂತೆ ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಅವರಿಗೆ ಸೂಚನೆ ನೀಡಿದರು.
ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಉಪನಿರ್ದೇಶಕ ಸಿದ್ದರಾಮ ಬೂದಿಹಾಳ ಮಾತನಾಡಿ, ಸರ್ಕಾರದ ಮಹತ್ವದ ಯೋಜನೆಯಾಗಿದ್ದು, ಪಂಚಾಯಿತಿ ಮಟ್ಟದಿಂದಲೂ ಯಶಸ್ಸು ಕಾಣಲು ಪಿಡಿಒಗಳ ಪರಿಶ್ರಮ ಮುಖ್ಯವಾಗಿದೆ. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮತ್ತು ತಾಂತ್ರಿಕ ಸಮಸ್ಯೆ ಉಂಟಾದರೆ ನೋಡಲ್ ಮತ್ತು ಪಿಡಿಒಗಳು ಅವರ ನೆರವಿಗೆ ಬಂದು ಬ್ಯಾಂಕ್ ಮ್ಯಾನೇಜರ್ ಬಳಿ ಸಮಸ್ಯೆ ಬಗೆಹರಿಸಬೇಕು ಎಂದು ಸೂಚನೆ ನೀಡಿದರು.
ತಾಂತ್ರಿಕ ಸಮಸ್ಯೆ ಬಗೆಹರಿಸಲು ಅದಕ್ಕಾಗಿಯೇ ಟೋಲ್ ಫ್ರೀ ನಂ. 1902 ಕರೆ ಮಾಡಬಹುದು. ಇಲ್ಲವೇ 8147500500 ಈ ಸಂಖ್ಯೆಗೆ ಸಂದೇಶ ಕಳುಹಿಸಿದರೆ ನಿಮ್ಮ ನೆರವಿಗೆ ಸಿಬ್ಬಂದಿ ಬರುತ್ತಾರೆ ಎಂದರು.
ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್ ಮಂಜಾನಂದ, ತಾಪಂ ಇಒ ವೈ.ಎಚ್.ಚಂದ್ರಶೇಖರ್, ಸಿಡಿಪಿಒ ಬೀರೇಂದ್ರ ಕುಮಾರ್, ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕಾ, ಶಾಂತಮ್ಮ ಸೇರಿದಂತೆ ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net