

ಚಿತ್ರದುರ್ಗ:ಗೃಹಲಕ್ಷ್ಮೀ ಯೋಜನೆ ನೋಂದಣಿಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಪಡಿತರ ಚೀಟಿ ಹೊಂದಿದ ಶೇ.70ರಷ್ಟು ಮನೆ ಯಜಮಾನಿಯರು ಅರ್ಜಿ ಸಲ್ಲಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ತಿಳಿಸಿದರು.
ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಇನ್ನುಳಿದವರು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಚುರುಕುಗೊಳಿಸಿ, ನಾಲ್ಕೈದು ದಿನದೊಳಗೆ ಶೇ.100ರ ಗುರಿ ಸಾಧಿಸಬೇಕು ಎಂದು ಸೂಚಿಸಿದರು.
ಗ್ರಾಮೀಣಕ್ಕಿಂತ ನಗರ ಪ್ರದೇಶದಲ್ಲಿ ನೋಂದಣಿ ಹೆಚ್ಚಾಗಿರುವುದು ಕಂಡುಬಂದಿದೆ. ಅಡಚಣೆ ಆಗದಂತೆ ಎಲ್ಲ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು. ಪ್ರತಿ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳು ನಿತ್ಯ 100 ನೋಂದಣಿ ಕಡ್ಡಾಯವಾಗಿ ಮಾಡಬೇಕು. ಮುಖ್ಯವಾಗಿ ಸಿಡಿಪಿಒಗಳು, ಗ್ರಾಮ, ವಾರ್ಡ್‌ವಾರು ಪಡಿತರ ಚೀಟಿ ಹೊಂದಿರುವವರ ಪಟ್ಟಿ ತಯಾರಿಸಿ, ನೋಂದಣಿ ಕೇಂದ್ರಗಳಿಗೆ ಕರೆ ತರಬೇಕು ಎಂದು ತಾಕೀತು ಮಾಡಿದರು.
ಪಡಿತರ ಚೀಟಿಗೆ ಆಧಾರ್ ಇ-ಕೆವೈಸಿ ಲಿಂಕ್ ಆಗಿರದ ಕಾರಣ ಅರ್ಜಿಗಳು ನೋಂದಣಿ ಆಗುತ್ತಿಲ್ಲ. ಸಾರ್ವಜನಿಕರು ತಾಲೂಕು ಕೇಂದ್ರ ಅಥವಾ ತಾಲೂಕು ಕಚೇರಿಗಳಿಗೆ ಅಲೆದಾಡದೆ, ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಲ್ಲೇ ಆಧಾರ್ ನಂಬರ್ ನೀಡಿ, ಬಯೋಮೆಟ್ರಿಕ್ ಮೂಲಕ ಇ-ಕೆವೈಸಿ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಇನ್ನೂ ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರ ವಿವರದಲ್ಲಿ ಪುರಷರ ಬದಲು ಮಹಿಳೆಯರ ಹೆಸರಿಗೆ ಆಹಾರ ಶಿರಸ್ತೇದಾರ್ ಅವರಿಗೆ ಅರ್ಜಿ ಸಲ್ಲಿಸಿ, ಬದಲಿಸಿಕೊಳ್ಳಲು ಅವಕಾಶವಿದೆ. ಎಲ್ಲ ತಹಸೀಲ್ದಾರ್ ಕಚೇರಿಗಳಲ್ಲಿ ಆಧಾರ್ ಸೇವಾ ಕೇಂದ್ರಗಳಿದ್ದು, ಆಧಾರ್‌ಗೆ ಮೊಬೈಲ್ ನಂಬರ್ ಜೋಡಣೆ ಮಾಡಿಸಿ. ಜಿಎಸ್‌ಟಿ, ಆದಾಯ ತೆರಿಗೆ ಸಲ್ಲಿಸದಿರುವ ಎಪಿಎಲ್ ಕಾರ್ಡ್ ಹೊಂದಿದವರು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂದರು.
*ಕುಂಠಿತವಾದಲ್ಲಿ ಸಿಡಿಪಿಒಗಳೇ ಹೊಣೆ:
ನೋಂದಣಿ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಆ.3ರಂದು ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ. ಅಷ್ಟರೊಳಗೆ ನೋಂದಣಿ ಇನ್ನಷ್ಟು ವೇಗ ಪಡೆಯಬೇಕು. ಈ ಕುರಿತು ಜನರನ್ನು ಪ್ರೇರೇಪಿಸಬೇಕು. ಕುಂಠಿತವಾದಲ್ಲಿ ಸಿಡಿಪಿಒಗಳನ್ನೇ ನೇರವಾಗಿ ಹೊಣೆಯಾಗಿಸಿ, ಅಂತವರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂದನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೆಶಕಿ ಭಾರತಿ ಆರ್ ಬಣಕಾರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ಸಿಡಿಪಿಒ ಸುಧಾ ಇತರರಿದ್ದರು.
*ಶೇ.70.4ರಷ್ಟು ಗುರಿ ಸಾಧನೆ
ಜಿಲ್ಲೆಯಲ್ಲಿ ಒಟ್ಟು 3,90,204 ಪಡಿತರ ಚೀಟಿ ಹೊಂದಿರುವ ಕುಟುಂಬಗಳಿವೆ. ಅದರಲ್ಲಿ ಜು. 30ರೊಳಗೆ 2,73,291 ಕುಟುಂಬದ ಒಡತಿಯರು ಗೃಹಲಕ್ಷ್ಮೀ ಯೋಜನೆಗೆ ಈಗಾಗಲೇ ನೋಂದಾಯಿಸಿದ್ದು, ಶೇ 70.4ರಷ್ಟು ಗುರಿ ಸಾಧಿಸಲಾಗಿದೆ.