

ಗದಗ: ಗ್ಯಾರಂಟಿ ಯೋಜನೆಗಳ ಅನುಷ್ಟಾನಗೊಳಿಸುವ ಮೂಲಕ ಬಡವರ ಬದುಕು ಆರ್ಥಿಕ ಸಬಲೀಕರಣದತ್ತ ಕೊಂಡೊಯ್ಯುವಲ್ಲಿ ಸಿದ್ಧರಾಮಯ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಗೃಹ ಲಕ್ಷ್ಮೀ ಯೋಜನೆ ಅನುಷ್ಟಾನಗೊಳಿಸುವ ಮೂಲಕ ನಮ್ಮ ಸರ್ಕಾರ ವಚನ ಪಾಲನೆ ಮಾಡಿದೆ. ಕೊಟ್ಟ ಮಾತು ಈಡೇರಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ತಿಳಿಸಿದರು.
ನಗರದ ಪಂಡಿತ ಭೀಮಸೇನ ಜೋಶಿ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿü ಇಲಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ, ಗದಗ ಬೆಟಗೇರಿ ನಗರಸಭೆ ಸಹಯೋಗದಲ್ಲಿ ಬುಧವಾರದಂದು ಏರ್ಪಡಿಸಿದ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ಯಾರಂಟಿ ಯೋಜನೆಗಳ ಅನುಷ್ಟಾನದಲ್ಲಿ ಸರ್ಕಾರ ದೃಢ ನಿರ್ಧಾರ ಕೈಗೊಂಡಿದೆ. ಈಗಾಗಲೇ ಶಕ್ತಿ , ಗೃಹ ಜ್ಯೋತಿ, ಅನ್ನಭಾಗ್ಯ, ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಗೊಳಿಸಿದೆ. ಇಂದು ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2,000ರೂ. ಒದಗಿಸುವ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡುವ ಮೂಲಕ ದೇಶಕ್ಕೆ ಮಾದರಿಯಾಗಿದೆ ಎಂದರು.
ಗೃಹಲಕ್ಷ್ಮೀ ಯೋಜನೆ ಮಹಿಳಾ ಸಬಲೀಕರಣದಲ್ಲಿ ಅಮೂಲಾಗ್ರ ಬದಲಾವಣೆ ತರುವ ಯೋಜನೆಯಾಗಿದೆ. ಕುಟುಂಬದ ಒಡತಿಗೆ ಪ್ರತಿ ತಿಂಗಳು 2,000 ರೂ. ನೀಡಲಾಗುತ್ತಿದ್ದು ಅದನ್ನು ಕುಟುಂಬದ ಅಡಚಣೆ ನಿವಾರಣೆಗಾಗಿ ಗುಣಾತ್ಮಕ ಜೀವನಕ್ಕೆ, ಮಕ್ಕಳ ಶಿಕ್ಷಣಕ್ಕೆ, ಸ್ವಾಭಿಮಾನದ ಬದುಕಿಗೆ ಬಳಕೆ ಮಾಡಿಕೊಳ್ಳಬೇಕು. ಈ ಯೋಜನೆಯ ಅನುಷ್ಟಾನವು ಬಡವರ ಬಾಳಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ ಎಂದು ನುಡಿದರು.
ಇಂದಿರಾ ಗಾಂಧಿಯವರ 20 ಅಂಶಗಳ ಕಾರ್ಯಕ್ರಮಗಳಿಂದ ಬಡತನ ನಿರ್ಮೂಲನೆಗೆ ಮುಂದಾಗಿತ್ತು. ಅವರ ಆಲೋಚನೆ, ಆಶಯಗಳ ಈಡೇರಿಕೆ ಉದ್ದೇಶದೊಂದಿಗೆ ಇಂದು ಬಡವರ ಬದುಕು ಗ್ಯಾರಂಟಿ ಯೋಜನೆಗಳಿಂದ ಬಂಗಾರವಾಗುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನದಿಂದ ಪ್ರತಿ ಕುಟುಂಬಕ್ಕೆ ವಾರ್ಷಿಕ ತಲಾ 50 ರಿಂದ 60 ಸಾವಿರ ಮೊತ್ತ ಸಿಗಲಿದೆ. ಈ ಮೂಲಕ ರಾಜ್ಯದ 1.05 ಲಕ್ಷ ಕುಟುಂಬಗಳು ಬಡತನ ರೇಖೆಯಿಂದ ಮೇಲೆ ಬರಲಿವೆ. ಜಿಲ್ಲೆಯಲ್ಲಿ ಪ್ರತಿಯೊಬ್ಬರ ತಲಾ ಆದಾಯ 90,000 ದಿಂದ 1.05 ಲಕ್ಷಕ್ಕೆ ಏರಿಕೆಯಾಗಲಿದೆ ಎಂದರು.
ಗದಗ ಜಿಲ್ಲೆಯಲ್ಲಿ 2.95 ಲಕ್ಷ ಪಡಿತರಚೀಟಿದಾರರ ಪೈಕಿ ಗೃಹಲಕ್ಷ್ಮೀ ಯೋಜನೆ ವ್ಯಾಪ್ತಿಗೆ 2.56 ಲಕ್ಷ ಪಡಿತರದಾರರು ಯೋಜನೆಯ ಫಲಾನುಭವಿಗಳಿದ್ದಾರೆ. ಇಂದು 2.16 ಲಕ್ಷ ಪಡಿತರ ಕುಟುಂಬಗಳಿಗೆ ತಲಾ 2,000 ದಂತೆ ಫಲಾನುಬವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ. ರಾಜ್ಯಾದ್ಯಂತ ಈ ಯೋಜನೆಗೆ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ,ಲಕ್ಷ್ಮೀ ಹೆಬ್ಬಾಳಕರ್, ಜಿ.ಪರಮೇಶ್ವರ,ಡಾ.ಎಚ್.ಸಿ.ಮಹದೇವಪ್ಪ ಅವರುಗಳು ಚಾಲನೆ ನೀಡಿದ್ದಾರೆ.
ಇಂತಹ ಅಭೂತಪೂರ್ವ ಜನಪರ ಯೋಜನೆಗಳ ಜಾರಿಗೆ ರಾಜಕೀಯ ಇಚ್ಛಾಶಕ್ತಿ ಬೇಕು. ಪ್ರಾಮಾಣಿಕವಾಗಿ ಅರ್ಹ ಫಲಾನುಭವಿಗೆ ಯೋಜನೆಯ ಸೌಲಭ್ಯ ತಲುಪಿಸುವ ಕಾರ್ಯ ನಮ್ಮ ಸರ್ಕಾರ ಮಾಡುತ್ತಿದೆ. ರಾಜ್ಯವನ್ನು ಚೆಲುವ ಕನ್ನಡ ನಾಡು ಮಾಡುವ ಸರ್ಕಾರ ಸಿದ್ಧರಾವiಯ್ಯ ನೇತೃತ್ವದ ಸರ್ಕಾರವಾಗಿದೆ. ಈ ಕಾರ್ಯಕ್ಕೆ ತಮ್ಮ ನಿರಂತರ ಸಹಕಾರ ಅತ್ಯಗತ್ಯ ಎಂದರು.
ಗ್ಯಾರಂಟಿಯೋಜನೆಗಳ ಅನುಷ್ಟಾನಕ್ಕೆ ರಾಜ್ಯಸರ್ಕಾರ 50 ರಿಂದ 60 ಸಾವಿರ ಕೋಟಿ ಅನುದಾನವನ್ನು ನೀಡುತ್ತಿದೆ. ಈ ಸಹಾಯಧನವನ್ನು ದೇವರ ದುಡ್ಡು ಎಂದು ತಿಳಿದು ಸದ್ಭಳಕೆ ಮಾಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಕುಟುಂಬದ ಯಜಮಾನಿಗೆ ಹೇಳಿದರು. ಜಿಲ್ಲೆಯಲ್ಲಿ ಗೃಹ ಲಕ್ಷ್ಮೀ ಯೋಜನೆಯಡಿ ಶೇ 88 ರಷ್ಟು ,ಗೃಹ ಜ್ಯೋತಿಯಲ್ಲಿ ಶೇ90 ರಷ್ಟು ಹಾಗೂ ಅನ್ನಭಾಗ್ಯ ಯೋಜನೆಯಡಿ ಶೇ95 ಕ್ಕೂ ಅಧಿಕ ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ತಲುಪಿಸಲಾಗಿದೆ. ಇದು ಹೆಮ್ಮೆ ಪಡುವ ವಿಷಯವಾಗಿದೆ ಎಂದರು.
ಬಡವರ ಬದುಕು ಸ್ವಾಭಿಮಾನದಿಂದ ಕೂಡಿರಲಿ.ಬಡವರ ಬಾಳಲ್ಲಿ ಗ್ಯಾರಂಟಿ ಯೋಜನೆಗಳಿಂದ ಬಹುದೊಡ್ಡ ಬದಲಾವಣೆ ಆಗಲಿದೆ ಎಂಬ ವಿಶ್ವಾಸ ನಮಗಿದೆ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಬಿ.ಎಸ್.ನೇಮಗೌಡ, ಗದಗ ಬೆಟಗೇರಿ ನಗರಸಭೆಯ ಪೌರಾಯುಕ್ತ ರಮೇಶ ಸುಣಗಾರ,ನಗರಾಬಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾರುತಿ ಬ್ಯಾಕೋಡ್, ಮಾಜಿ ಶಾಸಕ ಡಿ.ಆರ್.ಪಾಟೀಲ, ಗಣ್ಯರಾದ ಸಿದ್ಧು ಪಾಟೀಲ, ವಾಸಣ್ಣ ಕುರಡಗಿ, ಎಲ್.ಡಿ.ಚಂದಾವರಿ,ಗುರಣ್ಣ ಬಳಗಾನೂರ, ಪ್ರಭು ಬುರಬುರೆ,ಕೃಷ್ಣಾ ಪರಾಪುರ, ಬರಕತಲಿ, ಬಿ.ಬಿ.ಅಸೂಟಿ,ಪ್ರಕಾಶ ಬೊಮ್ಮನಹಳ್ಳಿ,ಪೀರಸಾಬ ಕೌತಾಳ,ಲಕ್ಷ್ಮೀ ಸಿದ್ಧಮ್ಮನಹಳ್ಳಿ, ಶಕುಂತಲಾ ಅಕ್ಕಿ ಹಾಜರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಆಗಮಿಸಿದ ಸಚಿವ ಎಚ್.ಕೆ.ಪಾಟೀಲ ಅವರಿಗೆ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಆರುತಿ ಬೆಳಗಿ ಸ್ವಾಗತಿಸಿದ್ದು ವಿಶೇಷವಾಗಿತ್ತು. ಪಂಡಿತ ವೆಂಕಟೇಶ ಅಲ್ಕೋಡ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ ಅತಿಥಿಗಳನ್ನು ಸ್ವಾಗತಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರ್ವಹಿಸಿದರು.
ಅಭಿನಂದನೆ : ಲಂಬಾಣಿ ಸಮುದಾಯದ ಮಹಿಳೆಯರು ಕಾರ್ಯಕ್ರಮಕ್ಕೂ ಮುನ್ನ ತಮ್ಮದೇ ಶೈಲಿಯ ಲಂಬಾಣಿ ನೃತ್ಯ ಹಾಗೂ ಗೀತೆ ಹಾಡುವ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಸಚಿವರಾದ ಎಚ್.ಕೆ.ಪಾಟೀಲ, ಲಕ್ಷ್ಮೀಹೆಬ್ಬಾಳಕರ್, ಎಚ್.ಸಿ.ಮಹದೇವಪ್ಪ,ರಾಹುಲ್ ಗಾಂಧಿ ಅವರುಗಳಿಗೆ ತಮ್ಮದೇ ಶೈಲಿಯ ಗೀತೆಯ ಮೂಲಕ ಅಭಿನಂದನೆ ಸಲ್ಲಿಸಿದರು.
ಅಭಿಪ್ರಾಯ: ಮಹಿಳೆಯರಿಗೆ,ಮಕ್ಕಳಿಗೆ ಮನೆತನದ ಜವಾಬ್ದಾರಿಯನ್ನು ಹೊತ್ತು ಮುನ್ನಡೆಸುವ ಕೆಲಸವನ್ನು ಮಾಡಬೇಕಿತ್ತು. ಅದರಲ್ಲಿಯೂ ಸಹ ಕೃಷಿಕ ಮಹಿಳೆಯರು ಜಮೀನಿನಲ್ಲಿ ದುಡಿದು ಅದರಿಂದ ಬಂದ ಆದಾಯದಿಂದ ಕುಟುಂಬ ನಿರ್ವಹಣೆ ನಡೆಸುವುದು ಕಷ್ಟಸಾಧ್ಯವಾಗಿತ್ತು. ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಆಡಳಿತಕ್ಕೆ ಬಂದ ಮೇಲೆ 5 ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಅನುಷ್ಟಾನಗೊಳಿಸುತ್ತಿರುವುದು ನಮಗೆಲ್ಲ ಆರ್ಥಿಕ ಸ್ವಾವಲಂಬನೆಗೆ ಅನುಕೂಲವಾಗಿದೆ.ಸರ್ಕಾರ ಬಡತನ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಮುನ್ನಡೆಯುತ್ತಿರುವುದು ಸಂತಸ ತಂದಿದೆ ಎಂದು ಬೆಳದಡಿ ಗ್ರಾಮದ ಗೃಹಲಕ್ಷ್ಮೀ ಫಲಾನುಭವಿ ಶಾರದಾ ತೋಟದ ಅಭಿಪ್ರಾಯ ಹಂಚಿಕೊಂಡರು.