

ಮುದಗಲ್: ಕಿಲ್ಲಾದಲ್ಲಿನ ಶ್ರೀರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮಕ್ಕೆ ಪುರಸಭೆಯಿಂದ ಅದ್ದೂರಿಯಾಗಿ ಬುಧವಾರ ಚಾಲನೆ ನೀಡಲಾಯಿತು.
ಕಾರ್ಯಕ್ರಮ ವೇದಿಕೆಯಲ್ಲಿ ಎಲ್‌ಇಡಿ ಪರದೆ ಅಳವಡಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಸದ ರಾಹುಲ್ ಗಾಂಧಿ ಯೋಜನೆಗೆ ಚಾಲನೆ ನೀಡುವುದನ್ನು ನೇರ ಪ್ರಸಾರ ವೀಕ್ಷಿಸಿದ ಸಾವಿರಾರು ಮಹಿಳೆಯರು ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದರು.
ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರಿಂದ ವೇದಿಕೆಯ ಮುಂಭಾಗದಲ್ಲಿ ಜಾಗ ಮತ್ತು ಖುರ್ಚಿಗಳು ಇಲ್ಲದೆ ಮಹಿಳೆಯರು ತಾಸಿಗೂ ಅಧಿಕ ಸಮಯ ನಿಂತು ಕಾರ್ಯಕ್ರಮ ವೀಕ್ಷಿಸಿದರು.
ಕಾರ್ಯಕ್ರಮಕ್ಕೆ ಪುರಸಭೆ ಮಹಿಳಾ ಸದಸ್ಯರು ಗೈರಾಗಿದ್ದು ಎದ್ದುಕಾಣುತ್ತಿತ್ತು. ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ ಕಾರ್ಯಕ್ರಮ ವೇದಿಕೆಯಲ್ಲಿ ಮಹಿಳಾ ಸದಸ್ಯರ ಬದಲಿಗೆ ಅವರ ಪತಿ ಮತ್ತು ಮಕ್ಕಳನ್ನು ಪುರಸಭೆ ಅಧಿಕಾರಿಗಳು ಆಹ್ವಾನಿಸಿ ಕಾರ್ಯಕ್ರಮಕ್ಕೆ ಚಾಲನೆ ಮಾಡಿಸಿದ್ದು ಪ್ರಜ್ಞಾವಂತರ ಅಸಮಾಧಾನಕ್ಕೆ ಕಾರಣವಾಯಿತು.