

ಮೈಸೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮೀ’ ಚಾಲನಾ ಕಾರ್ಯಕ್ರಮಕ್ಕೆ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯ ಮಹಿಳೆಯರು ಆಗಮಿಸಿದ್ದರು.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಬೆಳಗ್ಗೆ 10 ಗಂಟೆಯಿಂದ ಮೈಸೂರು ಗ್ರಾಮಾಂತರ, ಚಾಮರಾಜನಗರ, ಮಂಡ್ಯ, ಹಾಸನ ಮತ್ತು ಕೊಡಗು ಜಿಲ್ಲೆಗಳ ವಿವಿಧ ಭಾಗಗಳಿಂದ ಬಸ್‌ಗಳಲ್ಲಿ ಮಹಿಳೆಯರು ಆಗಮಿಸಿದರು. ಕಾರ್ಯಕ್ರಮ ವೀಕ್ಷಣೆಗಾಗಿಯೇ ರಾಜ್ಯದ ವಿವಿಧ ಭಾಗಗಳಿಂದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದರು.
ಮೈಸೂರು ಭಾಗದ ಐದು ಜಿಲ್ಲೆಗಳ ಪ್ರತಿ ಗ್ರಾಮ ಪಂಚಾಯಿತಿಯಿಂದ 120 ಮಹಿಳೆಯರನ್ನು ಕರೆತರಲು ಜನಪ್ರತಿನಿಧಿಗಳು, ಅಧಿಕಾರಿಗಳು ಸೂಚನೆ ನೀಡಿದ್ದರು. ಅದರಂತೆ ಪಿಡಿಒಗಳು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇತರರಿಗೆ ಅದರ ಜವಾಬ್ದಾರಿ ನೀಡಲಾಗಿತ್ತು. ಬಸ್‌ನಲ್ಲಿ ಆಗಮಿಸಿದ ಮಹಿಳೆಯರನ್ನು ಮೈದಾನದ ಬಳಿ ಇಳಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳುವ ಜತೆಗೆ, ಕಾರ್ಯಕ್ರಮ ಮುಗಿದ ನಂತರ ತಮ್ಮನ್ನು ಕರೆತಂದ ಬಸ್‌ಗಳಿದ್ದ ಸ್ಥಳಕ್ಕೆ ತೆರಳಿ ಸುರಕ್ಷಿತವಾಗಿ ಮನೆಗೆ ಹಿಂತಿರುಗಿ ಕಳುಹಿಸುವ ಜವಾಬ್ದಾರಿಯನ್ನು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ನೀಡಲಾಗಿತ್ತು. ಕಾರ್ಯಕ್ರಮಕ್ಕೆ ಬಹುಪಾಲು ಬಡ, ರೈತಾಪಿ ಹಾಗೂ ಶ್ರಮಿಕ ವರ್ಗದ ಮಹಿಳೆಯರೇ ಆಗಮಿಸಿದ್ದರು. ಜತೆಗೆ, ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಗಮನ ಸೆಳೆದರು.
ಖುಷಿಪಟ್ಟ ನಾರಿಯರು:
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರು ತಮ್ಮ ಖಾತೆಗೆ 2 ಸಾವಿರ ರೂ. ಜಮೆಯಾಗಿರುವ ಮೊಬೈಲ್ ಸಂದೇಶ್ ಬರುತ್ತಿದ್ದಂತೆಯೇ ಅಕ್ಕಪಕ್ಕದಲ್ಲಿ ಇದ್ದ ಮಹಿಳೆಯರಿಗೆ ಮೆಸೇಜ್ ತೋರಿಸಿ ಸಂಭ್ರಮಿಸಿದರು. ರಾಹುಲ್‌ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇತರರು ಆಗಮಿಸಿದಾಗ ಡೊಳ್ಳು ಕುಣಿತದ ಮೂಲಕ ಸ್ವಾಗತಿಸಲಾಯಿತು. ಈ ವೇಳೆ ಮಹಿಳಾ ಕಾರ್ಯಕರ್ತರು ನೃತ್ಯ ಮಾಡಿದರು.