‘ಗೃಹಲಕ್ಷ್ಮೀ’ ಚಾಲನೆಗೆ ಅದ್ದೂರಿ ಸಿದ್ಧತೆ

18
Published on

ಮೈಸೂರು: ರಾಜ್ಯ ಸರ್ಕಾರದ 4ನೇ ಗ್ಯಾರಂಟಿ ಯೋಜನೆಯಾದ ‘ಗೃಹಲಕ್ಷ್ಮೀ’ಗೆ ಆ.30ರಂದು ಚಾಲನೆ ದೊರೆಯಲಿದ್ದು, ಅದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಮೈಸೂರಿನಲ್ಲಿ ಭರ್ಜರಿ ತಯಾರಿ ಮಾಡಿಕೊಳ್ಳಲಾಗಿದೆ.


ಕಾರ್ಯಕ್ರಮ ನಡೆಯುವ ನಗರದ ಮಹಾರಾಜ ಕಾಲೇಜು ಮೈದಾನವನ್ನು ಬೃಹತ್ ವೇದಿಕೆಯೊಂದಿಗೆ ಸಿಂಗರಿಸಲಾಗಿದ್ದು, ಮೈಸೂರು ಅರಮನೆ ಪ್ರತಿಕೃತಿಯ ಮೂಲಕ ಸಾರ್ವಜನಿಕರ ಪ್ರವೇಶಿಸುವಂತೆ ಗಮನ ಸೆಳೆಯಲಾಗಿದೆ. ಕಾರ್ಯಕ್ರಮದ ಅಂತಿಮ ಹಂತದ ಸಿದ್ಧತೆಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರಿಶೀಲಿಸಿದರು. ಸಭಾ ವೇದಿಕೆ ನಿರ್ಮಿಸಿರುವ ಮಹಾರಾಜ ಕಾಲೇಜು ಮೈದಾನಕ್ಕೆ ಸೋಮವಾರ ಸಂಜೆ ಭೇಟಿ ನೀಡಿದ್ದರು.


‘ಮೈಸೂರಿನಲ್ಲಿ ನಡೆಯುವ ಈ ಕಾರ್ಯಕ್ರಮ ರಾಜ್ಯಾದ್ಯಂತ 10,400 ಸ್ಥಳಗಳಲ್ಲಿ, 6 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ, ವಾರ್ಡ್‌ಗಳಲ್ಲಿ ಒಂದು ಕಡೆ, ಬೆಂಗಳೂರಿನ 198 ವಾರ್ಡ್‌ಗಳಲ್ಲಿ ಏಕಕಾಲಕ್ಕೆ ನೇರ ಪ್ರಸಾರವಾಗಲಿದೆ. ನೇರ ಪ್ರಸಾರ ಸಂಬಂಧ ಸೋಮವಾರ ತಾಲೀಮು ನಡೆಸಲಾಯಿತು. ಎಲ್ಲ ಕಡೆ ಮಾಡಿಕೊಂಡಿರುವ ಸಿದ್ಧತೆಯನ್ನೂ ಪರಿಶೀಲಿಸಲಾಗಿದ್ದು, ನಾಳೆಯೂ(ಆ.29) ಮತ್ತೊಮ್ಮೆ ಪರಿಶೀಲನೆ ಮಾಡಲಾಗುವುದು ಎಂದು ಡಿಸಿಎಂ ಶಿವಕುಮಾರ್ ತಿಳಿಸಿದರು.


ಕಾರ್ಯಕ್ರಮದಲ್ಲಿ ಭಾಗಿಯಾಗೋರು ಮಾತ್ರ ಮುಖ್ಯವಲ್ಲ. ಈಗಾಗಲೇ 50 ಲಕ್ಷ ಫಲಾನುಭವಿಗಳಿಗೆ ಪಟ್ಟಿ ಸಿದ್ಧಪಡಿಸಲಾಗಿದೆ. ಹಂತ ಹಂತವಾಗಿ ಎಲ್ಲ ಫಲಾನುಭವಿಗಳಿಗೂ ಗೃಹಲಕ್ಷ್ಮೀ ಯೋಜನೆ ಹಣ ತಲುಪಲಿದೆ. ಈ ಕಾರ್ಯಕ್ರಮ ಪಕ್ಷಾತೀತವಾಗಿದೆ. ಆಯಾಯ ಕ್ಷೇತ್ರದ ಶಾಸಕರು ಈ ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ತಿಳಿಸಿದರು.


ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ 1 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ಇಡೀ ಮೈದಾನವನ್ನು ಸಜ್ಜುಗೊಳಿಸಲಾಗಿದೆ. ಮೈದಾನ ಪೂರ್ಣ ಶಾಮಿಯಾನ ಹಾಕಲಾಗಿದೆ.


ರಾರಾಜಿಸುತ್ತಿವೆ ಫ್ಲೆಕ್ಸ್‌ಗಳು:
ಮಹಾರಾಜ ಹಾಸ್ಟೆಲ್ ವೃತ್ತದಿಂದ ರಾಮಸ್ವಾಮಿ ವೃತ್ತದವರೆಗೆ ಕಾಂಗ್ರೆಸ್ ನಾಯಕರು, ಸಚಿವರು, ಶಾಸಕರ ಫ್ಲೆಕ್ಸ್‌ಗಳು ರಾಜಾಜಿಸುತ್ತಿವೆ. ರಸ್ತೆಯುದ್ದಕ್ಕೂ ಗಣ್ಯರನ್ನು ಸ್ವಾಗತ ಕೋರುವ ವೃತ್ತಾಕಾರದ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ವೃತ್ತಗಳನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ವಿದ್ಯುತ್ ಕಂಬಗಳಲ್ಲಿ ಮೈಕ್ ಅಳವಡಿಸಿ ಮೈದಾನದ ಸುತ್ತಲಿನ ಜನರಿಗೆ ಭಾಷಣ ಕೇಳುವ ವ್ಯವಸ್ಥೆ ಮಾಡಲಾಗಿದೆ.


ಸಿಎಂ ಠಿಕಾಣಿ:
ಕಾರ್ಯಕ್ರಮಕ್ಕೆ ಎರಡು ಮುನ್ನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ನಗರಕ್ಕೆ ಆಗಮಿಸಿ ಠಿಕಾಣಿ ಹೂಡಿದ್ದಾರೆ. ಎಲ್ಲ್ಲ ಸಿದ್ಧತೆಗಳನ್ನು ಅವಲೋಕಿಸುತ್ತಿದ್ದಾರೆ. ಜತೆಗೆ ಅಂತಿಮ ಹಂತದ ಕಾರ್ಯಗಳನ್ನೂ ಶೀಘ್ರ ಮುಗಿಸುವಂತೆ ಸಲಹೆ ನೀಡಿದ್ದಾರೆ.


2 ಸಾವಿರ ಬಸ್‌ಗಳ ವ್ಯವಸ್ಥೆ:
ಚಾಮರಾಜನಗರ, ಕೊಡಗು, ಹಾಸನ, ಮಂಡ್ಯ, ಮೈಸೂರು ಫಲಾನುಭವಿಗಳು ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಐದು ಜಿಲ್ಲೆಗಳಿಂದ ಒಂದು ಲಕ್ಷ ಮಹಿಳೆಯರನ್ನು ಕರೆತರಲು ಗ್ರಾಪಂ ಪಿಡಿಒ ಮತ್ತು ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಜವಾಬ್ದಾರಿ ನೀಡಲಾಗಿದೆ. ಮಹಿಳೆಯರನ್ನು ಕರೆತರಲು ಕೆಎಸ್‌ಆರ್‌ಟಿಸಿಯ 2 ಸಾವಿರ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಐದು ಜಿಲ್ಲೆಗಳ ಮಹಿಳೆಯರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಪಿಡಿಒಗಳು, ಅಂಗನವಾಡಿ ಕಾರ್ಯಕರ್ತೆಯರು ಅರ್ಜಿ ಹಾಕಿದ ಮಹಿಳೆಯರಲ್ಲಿ ಪಂಚಾಯಿತಿವಾರು ಆಯ್ಕೆ ಮಾಡಿ ಕರೆದುಕೊಂಡು ಬರುವ ವ್ಯವಸ್ಥೆ ಮಾಡಲಾಗಿದೆ.


ನಾಯಕರೊಂದಿಗೆ ಸಂವಾದ:
ಪಂಚಾಯಿತಿ ಮಟ್ಟದ ಒಂದಷ್ಟು ಜನ ಮಹಿಳೆಯರು ರಾಷ್ಟ್ರೀಯ ನಾಯಕರ ಜತೆ ನೇರವಾಗಿ ಸಂವಾದ ಮಾಡಬಹುದು. ಮೈಸೂರಿನಲ್ಲಿರುವ ವೇದಿಕೆಯ ಅಳತೆಯಷ್ಟೇ 140 ಅಡಿಯ ಪರದೆಯ ವ್ಯವಸ್ಥೆ ಮಾಡಿದ್ದು ಆ ಪರದೆಯಲ್ಲಿ ಎಲ್ಲ ಪಂಚಾಯಿತಿಗಳ ವೀಕ್ಷಕರನ್ನು ತೋರಿಸಲಾಗುತ್ತದೆ. ಗೃಹಲಕ್ಷ್ಮೀ ಯೋಜನೆಯ ಫಲಾನುವಭವಿಗಳು ಮನೆಯ ಮುಂದೆ ‘ನಾ ನಾಯಕಿ’, ‘ಗೃಹಲಕ್ಷ್ಮೀ’ ಎಂದು ರಂಗೋಲಿ ಹಾಕುವ ಕಾರ್ಯಕ್ರಮವೂ ಇದೆ. ಪ್ರತಿ ಯಜಮಾನಿಯ ಮನೆಗೆ ಹೋಗಿ ಅಧಿಕಾರಿಗಳು ಖುದ್ದಾಗಿ ಆಹ್ವಾನ ಪತ್ರಿಕೆ ನೀಡುತ್ತಿರುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net