ಗೃಹಲಕ್ಷ್ಮಿ ಯೋಜನೆ ಚಾಲನೆಗೆ ಸಿದ್ಧತೆ ಮಾಡಿಕೊಳ್ಳಿ

2808-Kpl-Ravi-7
ಗೃಹಲಕ್ಷ್ಮೀಯೋಜನೆ ಚಾಲನಾ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುವ ಸಂಬಂಧ ಸೋಮವಾರ ಕೊಪ್ಪಳದಲ್ಲಿ ಎಡಿಸಿ ಸಾವಿತ್ರಿ ಕಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಸಿಡಿಪಿಓ ಜಯಶ್ರೀ ರಾಜಪುರೋಹಿತ ಇದ್ದರು.
Published on

ಕೊಪ್ಪಳ:ಗೃಹ ಲಕ್ಷ್ಮಿ ಯೋಜನೆ ಚಾಲನಾ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಎಡಿಸಿ ಸಾವಿತ್ರಿ ಕಡಿ ಅಧಿಕಾರಿಗಳಿಗೆ ಸೂಚಿಸಿದರು.


ನಗರದ ಜಿಲ್ಲಾಡಳಿತ ಭವನದ ಕೇಸ್ವಾನ್ ಹಾಲ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದರು.


ಮಹಿಳೆಯರ ಆರ್ಥಿಕ ಸಬಲೀಕರಣ ಉದ್ದೇಶದಿಂದ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2000 ರೂ. ನೀಡುವುದು ಯೋಜನೆ ಉದ್ದೇಶ. ಚಾಲನಾ ಕಾರ್ಯಕ್ರಮಕ್ಕೆ ಆಸನ, ಕುಡಿವ ನೀರು ಸೇರಿ ಅಗತ್ಯ ಸಿದ್ಧತೆ ಮಾಡಿಕೊಳ್ಳಿ. ಆ.30ರಂದು ಜಿಲ್ಲಾ ಸಾಹಿತ್ಯ ಭವನದಲ್ಲಿ ಕಾರ್ಯಕ್ರಮ ಜರುಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ, ಸಂಸದ, ಶಾಸಕರು ಹಾಗೂ ಇತರ ಜನಪ್ರತಿನಿಧಿಗಳು ಭಾಗಿಯಾಗುವರು. ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವರು. ಕಾರ್ಯಕ್ರಮ ಹಿನ್ನೆಲೆಯಲ್ಲಿ ನೇಮಕಕೊಂಡ ಸಮಿತಿ ಪದಾಧಿಕಾರಿಗಳು ಅಚ್ಚುಕಟ್ಟಾಗಿ ನಿಮ್ಮ ಕೆಲಸ ನಿರ್ವಹಿಸಿ.


ರಾಜ್ಯಮಟ್ಟದಲ್ಲಿ ನಡೆವ ಮುಖ್ಯ ವೇದಿಕೆಯಿಂದ ಫಲಾನುಭವಿಗಳೊಂದಿಗಿನ ನೇರ ಸಂವಾದ ಕಾರ್ಯಕ್ರಮ ಇರಲಿದೆ. ಎಲ್‌ಇಡಿ ಟಿವಿ, ಮೈಕ್, ಇಂಟರನೆಟ್, ವಿದ್ಯುತ್ ಸಂಪರ್ಕ ಸರಿಯಾಗಿರುವಂತೆ ನೋಡಿಕೊಳ್ಳಿ. ಜಿಲ್ಲೆಯ 9 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 27 ಕಡೆ ಮತ್ತು ಜಿಲ್ಲೆಯ 153 ಗ್ರಾಪಂಗಳಲ್ಲಿ ಚಾಲನಾ ಕಾರ್ಯಕ್ರಮದ ನೇರ ವೀಕ್ಷಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ನಿರ್ದೇಶಿಸಿದರು.


ಜಿಲ್ಲೆಯಲ್ಲಿ ಗೃಹ ಲಕ್ಷ್ಮಿ ಯೋಜನೆಗೆ 2,78,368 ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಗಂಗಪ್ಪ ಸಭೆಗೆ ಮಾಹಿತಿ ನೀಡಿದರು. ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಸಿಡಿಪಿಓ ಜಯಶ್ರೀ ರಾಜಪುರೋಹಿತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net