ಗೃಹಲಕ್ಷ್ಮಿ, ಪಡಿತರ ಹಣ ಜಮೆ ಮಾಡಿ - ಶಾಸಕ ಬಸವಂತಪ್ಪ ಸೂಚನೆ -ನವಿಲೇಹಾಳ್ ಗ್ರಾಮದಲ್ಲಿ ಪ್ರಗತಿ ಪರಿಶೀಲನೆ

IMG-20230911-WA0027.jpg
Published on

ದಾವಣಗೆರೆ: ತಾಲೂಕಿನ ನವಿಲೇಹಾಳ್ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಗ್ರಾಪಂ ಮಟ್ಟದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಮೊದಲ ಬಾರಿಗೆ ತಾಲೂಕು ಮಟ್ಟದ ಅಧಿಕಾರಿಗಳನ್ನು ಹಳ್ಳಿಗೆ ಕರೆದೊಯ್ದು ಸ್ಥಳದಲ್ಲೇ ಜನರ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯಕ್ಕೆ ಚಾಲನೆ ನೀಡಿದರು.

ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಕೆ, ಅಕ್ರಮ-ಸಕ್ರಮದಡಿ ರೈತರಿಗೆ ಟಿಸಿ ವಿತರಣೆ, ಬರಗಾಲ ಹಿನ್ನೆಲೆಯಲ್ಲಿ ರೈತರಿಗೆ ಪರಿಹಾರ ವಿತರಣೆ ಸೇರಿ ಪ್ರಮುಖ ವಿಷಯಗಳು ಚರ್ಚೆಗೀಡಾದವು.

ಗೃಹಲಕ್ಷ್ಮಿ, ಪಡಿತರ ಹಣ ಕೆಲವರ ಖಾತೆಗೆ ಜಮೆ ಆಗದಿರುವ ದೂರುಗಳು ಬರುತ್ತಿವೆ. ಕೂಡಲೇ ತಹಸೀಲ್ದಾರ್, ತಾಪಂ ಇಒ, ಬ್ಯಾಂಕ್, ಆಹಾರ ಇಲಾಖೆ ಅಧಿಕಾರಿಗಳು, ಸಂಬಂಧಪಟ್ಟ ನ್ಯಾಯ ಅಂಗಡಿಗಳ ಮಾಲೀಕರೊಂದಿಗೆ ಸಮನ್ವಯ ಸಾಧಿಸಿ ಪರಿಹರಿಸಬೇಕು.

ಬ್ಯಾಂಕ್‌ಗೆ ಆಧಾರ್ ಲಿಂಕ್ ಆಗದ ಅಥವಾ ಲಿಂಕ್ ಆಗಿದ್ದರೂ ಅವರ ಖಾತೆಗೆ ಹಣ ಜಮೆ ಆಗಿರದವರನ್ನು ಗುರುತಿಸಿ ಹಣ ಜಮೆಗೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು, ಗರ್ಭಿಣಿ-ಬಾಣಂತಿಯರಿಗೆ ಗುಣಮಟ್ಟದ ಪೌಷ್ಟಿಕ ಆಹಾರ ನೀಡಲು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು. ಬರಗಾಲ ಹಿನ್ನೆಲೆಯಲ್ಲಿ ಬೆಸ್ಕಾಂ ಅಧಿಕಾರಿಗಳು ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು. ಅಕ್ರಮ-ಸಕ್ರಮದಡಿ ಟಿಸಿಗೆ ಅರ್ಜಿ ಸಲ್ಲಿಸಿರುವ ಅನ್ನದಾತರಿಗೆ, ಟೆಂಡರ್ ಕರೆದು ನಿಯಮಾನುಸಾರ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.

ಈ ಬಾರಿ ಮಳೆ ಇಲ್ಲದೆ ಬರಗಾಲ ಸಂಭವಿಸಿ ರೈತರು ಕಂಗಾಲಾಗಿದ್ದು, ಕೇಂದ್ರ ಸರ್ಕಾರ ಬೆಳೆ ವಿಮೆ ಕಟ್ಟಿದ ಎಲ್ಲಾ ರೈತರ ಖಾತೆಗೆ ಬೆಳೆ ವಿಮೆ ಜಮೆ ಮಾಡಬೇಕು. ಹಿಂದಿನ ವರ್ಷಗಳಲ್ಲಿ ಬೆಳೆ ವಿಮೆ ಕಟ್ಟಿದ ಕೆಲವೇ ರೈತರ ಖಾತೆಗೆ ಹಣ ಜಮೆ ಆಗಿರುವ ದೂರುಗಳಿವೆ. ಕಂತು ಭರಿಸಿದ ರೈತರ ಖಾತೆಗೆ ಹಣ ಪಾವತಿಸಬೇಕೆಂದು ಆಗ್ರಹಿಸಿದರು.

ಮುಂಗಾರು ಇಲ್ಲದೆ ರೈತರು ತತ್ತರಿಸಿ ಹೋಗಿದ್ದಾರೆ. ಹಿಂಗಾರು ಆರಂಭದ ಪೂರ್ವದಲ್ಲಿಯೇ ರೈತರಿಗೆ ಸಮರ್ಪಕ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮಾಡಿ ವಿತರಿಸಬೇಕೆಂದು ಕೃಷಿ ಅಧಿಕಾರಿಗಳಿಗೆ ಹೇಳಿದರು.

ಚನ್ನಗಿರಿ ತಹಸೀಲ್ದಾರ್ ಯರ‌್ರಿಸ್ವಾಮಿ, ಗ್ರಾಪಂ ಅಧ್ಯಕ್ಷ ಹನುಮಂತಪ್ಪ, ಉಪಾಧ್ಯಕ್ಷೆ ಮುಮ್ತಾಜ್ ಬೇಗಂ, ತಾಲೂಕು ಆರೋಗ್ಯಾಧಿಕಾರಿ ಡಾ.ಶಿವಕುಮಾರ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ವಿವಿಧ ಸೌಲಭ್ಯಗಳ ಅರ್ಹ ಫಲಾನುಭವಿಗಳಿಗೆ ಆದೇಶಪತ್ರ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net