

ಹಿರೀಸಾವೆ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಹಿನ್ನೆಲೆ ನಡೆಯುತ್ತಿರುವ ಸರ್ವ ಧರ್ಮ ಸಮ್ಮೇಳನದಲ್ಲಿ ಭಾಗಿಯಾಗಲು ತೆರಳುತ್ತಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ಅವರನ್ನು ಮಾರ್ಗ ಮಧ್ಯೆ ಹಿರೀಸಾವೆ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಡಿಎಸ್‌ಎಸ್ ಸಂಘಟನೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹೂಗುಚ್ಛ ನೀಡಿ ಶುಕ್ರವಾರ ಸ್ವಾಗತಿಸಿದರು.
ಹಿರೀಸಾವೆ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣ ಕಾರ್ಯಕ್ಕೆ ಗುದ್ದಲಿ ಪೂಜೆ ಹಮ್ಮಿಕೊಳ್ಳಲು ಸಮಯ ನಿಗದಿಪಡಿಸಿಕೊಡುವಂತೆ ಡಿಎಸ್‌ಎಸ್ ಕಾರ್ಯಕರ್ತರು ಗೃಹ ಸಚಿವರಲ್ಲಿ ಕೇಳಿಕೊಂಡರು. ಶೀಘ್ರದಲ್ಲಿಯೇ ಒಳ್ಳೆಯ ದಿನ ನಿಗದಿಪಡಿಸಿ ಸಮಯ ತಿಳಿಸಲಾಗುವುದು ಎಂದು ಭರವಸೆ ನೀಡಿದ ಸಚಿವರು ನಂತರ ಧರ್ಮಸ್ಥಳದ ಕಡೆಗೆ ಪ್ರಯಾಣಿಸಿದರು.
ಡಾ.ಜಿ.ಪರಮೇಶ್ವರ್ ಯುವಕರ ಸಂಘದ ಅಧ್ಯಕ್ಷ ಮಂಜುನಾಥ್, ರಾಜ್ಯ ಮಾನವ ಹಕ್ಕು ತನಿಖಾ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಅಭಿಲಾಶ್, ಚನ್ನರಾಯಪಟ್ಟಣ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ಎನ್.ಮಂಜುನಾಥ್, ಕಾಂಗ್ರೆಸ್ ಮುಖಂಡರಾದ ಉದಯಕುಮಾರ್, ಮಹೇಶ್, ರಘು, ಮತಿಘಟ್ಟ ರಂಗಸ್ವಾಮಿ, ಆಕರ್ಷ, ದೇವರಾಜ್, ಹರೀಶ್ ಹಾಗೂ ಇತರರಿದ್ದರು.