

ಬೀದರ್: ಮನೆ ಬಾಗಿಲಲ್ಲೇ ಆರೋಗ್ಯ ಸೇವೆ ಒದಗಿಸುವ ಗೃಹ ಆರೋಗ್ಯ ಯೋಜನೆ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ ಹಾಗೂ ಜಲ್ಲಾ ಅಸಾಂಕ್ರಮಿಕ ನಿಯಂತ್ರಣ ಕೋಶ ಸಹಯೋಗದಡಿ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗೃಹ ಆರೋಗ್ಯ ಯೋಜನೆಗೆ ಚಾಲನೆ ನೀಡಿದ ಅವರು, ಆರೋಗ್ಯ ಸೇವೆ ಮನೆ-ಮನೆಗೆ ಎಂಬ ಧ್ಯೇಯದೊಂದಿಗೆ ೧೪ ಅಸಾಂಕ್ರಾಮಿಕ ರೋಗಗಳಾದ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಬಾಯಿ ಕ್ಯಾನ್ಸರ್, ಸ್ತನ, ಗರ್ಭಕಂಠ ಕ್ಯಾನ್ಸರ್, ಡಯಾಬಿಟಿಕ್, ಮಾನಸಿಕ, ನರವೈಜ್ಞಾನಿಕ ಸಮಸ್ಯೆ, ನಿದ್ರೆಯಲ್ಲಿ ಉಸಿರುಗಟ್ಟುವಿಕೆ, ದೀರ್ಘಕಾಲದ ಮೂತ್ರಪಿಂಡ ಮತ್ತು ಶ್ವಾಸಕೋಶ, ಲಿವರ್, ರಕ್ತಹೀನತೆಯಂಥ ಸಮಸ್ಯೆ ಇರುವ ೩೦ ವರ್ಷ ಮೇಲ್ಪಟ್ಟವರಿಗೆ ಉಚಿತ ತಪಾಸಣೆ, ಚಿಕಿತ್ಸೆ ಮತ್ತು ಅನುಸರಿಸಬೇಕಾದ ವಿಧಾನದ ಬಗ್ಗೆ ತಿಳಿಹೇಳಲಾಗುವುದು ಎಂದು ತಿಳಿಸಿದರು.
ನಮ್ಮ ಸರ್ಕಾರ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಜತೆಗೆ ರೋಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿದೆ. ಇಂದಿನ ಪರಿಸರ ಮಾಲಿನ್ಯದಿಂದ ಆಹಾರ, ನೀರು, ಗಾಳಿ ಮಲಿನವಾಗುತ್ತಿದೆ. ಬದಲಾದ ಜೀವನ ಶೈಲಿ, ಒತ್ತಡದ ಜೀವನ ಮತ್ತು ದುಶ್ಚಟಗಳಿಂದ ಆರೋಗ್ಯದ ಮೇಲೆ ಪರಿಣಾಮ ಬೀರಿ ರೋಗಗಳಿಗೆ ಅನುವು ಮಾಡಿಕೊಡುತ್ತಿದೆ. ನಗರೀಕರಣ, ಕೈಗಾರೀಕರಣ ಸಹ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಸಾಂಕ್ರಮಿಕ ರೋಗಗಳಿಂದ ಶೇ.೬೦-೬೫ ಜನ ಮರಣ ಹೊಂದುತ್ತಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತವೆ. ಹೀಗಾಗಿ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ವೈದ್ಯರು, ಆಯುಷ್ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರ ಪಾತ್ರ ಇದರಲ್ಲಿ ಬಹಳ ದೊಡ್ಡದು. ಮನೆ-ಮನೆಗೆ ಭೇಟಿ ನೀಡಿ ಶೇ.೧೦೦ ಗುರಿ ಮುಟ್ಟಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಧ್ಯಾನೇಶ್ವರ ನಿರಗುಡೆ, ಜಿಲ್ಲಾ ಶಸ ಚಿಕಿತ್ಸಕ ಅಹ್ಮದುದ್ದೀನ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಶಂಕ್ರಪ್ಪ ಬೊಮ್ಮಾ ಇತರರಿದ್ದರು.
ಗೃಹ ಆರೋಗ್ಯ ಯೋಜನೆ ಮುಖ್ಯ ಉದ್ದೇಶವೆಂದರೆ ರೋಗಗಳನ್ನು ಶೀಘ್ರ ಪತ್ತೆ ಹಚ್ಚುವುದು. ಇದು ಅಕಾಲಿಕ ಸಾವು ಇತರ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ ಗುರಿ ಹೊಂದಿದೆ.
| ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ