ಗೂಡ್ಸ್‌ವಾಹನ ಮಗುಚಿ ಕಾರ್ಮಿಕ ಸಾವು

Published on

ಹನೂರು : ಪಟ್ಟಣದಿಂದ ಅಜ್ಜೀಪುರಕ್ಕೆ ತೆರಳುವ ಮಾರ್ಗಮಧ್ಯೆ ಕೈಗೊಂಡಿರುವ ಸೇತುವೆ ನಿರ್ಮಾಣ ಕಾಮಗಾರಿ ನಡೆಯುವ ಸ್ಥಳದ ಬಳಿ ಭಾನುವಾರ ಸಿಮೆಂಟ್ ಕಾಂಕ್ರೀಟ್ ಯಂತ್ರ ಕೊಂಡೊಯ್ಯುತ್ತಿದ್ದ ಗೂಡ್ಸ್ ವಾಹನ ಮಗುಚಿಬಿದ್ದು ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ.

ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದ ನಿಂಗರಾಜು (40) ಮೃತ ದುರ್ದೈವಿ. ಈತ ಬೆಳಗ್ಗೆ 11ಗಂಟೆಯಲ್ಲಿ ಮನೆ ಕಟ್ಟಡ ನಿರ್ಮಾಣದ ಕಾಂಕ್ರೀಟ್ ಕೆಲಸಕ್ಕಾಗಿ ತನ್ನ ಜತೆಗಾರರೊಂದಿಗೆ ಅಜ್ಜೀಪುರ ಗ್ರಾಮಕ್ಕೆ ಗೂಡ್ಸ್ ವಾಹನದ ಹಿಂಬದಿಯಲ್ಲಿ ಕುಳಿತು ತೆರಳುತ್ತಿದ್ದರು. ಈ ವೇಳೆ ಅಜ್ಜೀಪುರ ಸಮೀಪದಲ್ಲಿ ಕೈಗೊಂಡಿರುವ ಸೇತುವೆ ನಿರ್ಮಾಣ ಕಾಮಗಾರಿಯ ಬಳಿ ಟ್ರಾೃಕ್ಟರ್ ಎದುರು ಬಂದ ಪರಿಣಾಮ ಗೂಡ್ಸ್ ವಾಹನದ ಹಿಂಬದಿಯಲ್ಲಿ ಅಳವಡಿಸಿದ್ದ ಸಿಮೆಂಟ್ ಕಾಂಕ್ರೀಟ್ ಯಂತ್ರದೊಂದಿಗೆ ಗೂಡ್ಸ್ ವಾಹನ ಮುಗಚಿ ಬಿದ್ದು ನಿಂಗರಾಜು ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ಸುದ್ದಿ ತಿಳಿದು ಇನ್‌ಸ್ಪೆಕ್ಟರ್ ಶೇಷಾದ್ರಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮೃತ ದೇಹವನ್ನು ರಾಮಾಪುರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಯಿತು. ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net