

ಕೊಳ್ಳೇಗಾಲ: ತಾಲೂಕಿನ ಮಧುವನಹಳ್ಳಿ ರಸ್ತೆಯಲ್ಲಿ ಬೊಲೆರೊ ಗೂಡ್ಸ್ ವಾಹನ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್‌ನಲ್ಲಿದ್ದ ಮೂವರ ಪೈಕಿ ಒಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ತಾಲೂಕಿನ ಹೊಂಡರಬಾಳು ಗ್ರಾಮದ ಕುಮಾರ(35) ಅಪಘಾತದಲ್ಲಿ ಮೃತಪಟ್ಟವರು. ಅದೇ ಗ್ರಾಮದ ಲಿಂಗರಾಜು (41) ಹಾಗೂ ನಿಂಗರಾಜು(33) ಗಾಯಾಳುಗಳಾಗಿದ್ದಾರೆ.
ಇವರು ಗಾರೆ ಕೆಲಸ ಮಾಡುವವರಾಗಿದ್ದು, ಎಂದಿನಂತೆ ಹನೂರು ತಾಲೂಕಿನ ಮಂಗಲ ಗ್ರಾಮದಲ್ಲಿ ಗಾರೆಕೆಲಸ ಮುಗಿಸಿಕೊಂಡು ಬುಧವಾರ ರಾತ್ರಿ ಒಂದೇ ಬೈಕ್‌ನಲ್ಲಿ ಮೂವರು ಬರುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಮಧುವನಹಳ್ಳಿ ಗ್ರಾಮದ ಹೊರವಲಯದ ಲೊಕ್ಕನಹಳ್ಳಿ ಕ್ರಾಸ್ ಬಳಿ ಎದುರಿನಿಂದ ಬಂದ ಬೊಲೆರೊ ಪಿಕಪ್ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದೆ. ಈ ಅವಘಡದಿಂದ ಬೈಕ್ ಸವಾರ ಕುಮಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೈಕ್‌ನಲ್ಲಿದ್ದ ಇನ್ನಿಬ್ಬರು ಸವಾರರು ಗಾಯಗೊಂಡಿದ್ದರು. ತಕ್ಷಣ ಕೊಳ್ಳೇಗಾಲ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುರುವಾರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಯಿತು.