ಗೂಡಿಗೆ ಮರಳಿಸಿದ ಕರೊನಾ!

13CHN3
Published on

ಚಾಮರಾಜನಗರ: ‘ಬಾಳೀನ ಬೆನ್ನು ಹತ್ತಿ…ನೂರಾರು ಊರು ಸುತ್ತಿ.. ಏನೇನೋ ಕಂಡ ಮೇಲು.. ನಮ್ಮೂರೆ ನಮಗೆ ಮೇಲು..’ ಎನ್ನುವುದನ್ನು ಮಹಾಮಾರಿ ಕರೊನಾ ಜಿಲ್ಲೆಯ ಯುವ ಸಮುದಾಯಕ್ಕೆ ಸ್ಪಷ್ಟವಾಗಿ ತಿಳಿಸಿಕೊಟ್ಟಿದೆ.

ಕೆಲಸ ಅರಸಿ, ಪಟ್ಟಣದ ಸೆಳೆತಕ್ಕೊಳಗಾಗಿ ಸ್ವಗ್ರಾಮ ತೊರೆದಿದ್ದ ಯುವಜನರು ಬೆಂಗಳೂರು, ಮೈಸೂರು ಸೇರಿದಂತೆ ಮಹಾನಗರಗಳಲ್ಲಿ ಕರೊನಾ ವೈರಸ್ ತಂದೊಡ್ಡಿರುವ ಆತಂಕ, ಹಾವಳಿ, ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿರುವ ಉದ್ಯೋಗದಿಂದಾಗಿ ಮರಳಿ ಗೂಡು ಸೇರಿದ್ದಾರೆ. ಪರಿಣಾಮ ಮಕ್ಕಳೇ ಇಲ್ಲದೆ ವೃದ್ಧಾಶ್ರಮಗಳಂತಾಗಿದ್ದ ಹಳ್ಳಿಗಳು ಈಗ ತುಂಬಿದ ಮನೆಗಳಾಗಿ ಪರಿವರ್ತನೆಯಾಗಿವೆ.

ಜಗುಲಿ ಮೇಲೆ ಜುಗುಲ್ಬಂದಿ: ಹಳ್ಳಿಗಳ ಅರಳಿಕಟ್ಟೆ, ಜಗುಲಿಗಳ ಮೇಲೆ ಕುಳಿತು ಲೋಕಾಭಿರಾಮದ ಮಾತುಗಳನ್ನಾಡುತ್ತಿದ್ದ ವೃದ್ಧರಿಗೆ ಗ್ರಾಮಕ್ಕೆ ಮರಳಿರುವ ಯುವಜನರು ಸಾಥ್ ನೀಡುತ್ತಿದ್ದಾರೆ.

ಕೆಲಸ ಮಾಡುವ ಜಿಲ್ಲೆಗಳಲ್ಲೆಲ್ಲಾ ಕರೊನಾ ವಕ್ಕರಿಸುತ್ತಿರುವುದಕ್ಕೆ ಹೆದರಿ ಹೇಗೋ ತಮ್ಮ ಊರುಗಳಿಗೆ ಬಂದು ಸೇರಿ ನಿಟ್ಟುಸಿರು ಬಿಟ್ಟಿರುವವರು ತಮ್ಮ ಪಾಲಕರೊಂದಿಗೆ ಜಗುಲಿ ಮೇಲೆ ಜುಗುಲ್ಬಂದಿ ಮಾತುಕತೆ ನಡೆಸುತ್ತಾ ಕಾಲಕಳೆಯುತ್ತಿರುವುದು ಗ್ರಾಮೀಣ ಭಾಗದಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯಗಳಾಗಿವೆ.

ಯಳಂದೂರು ತಾಲೂಕಿನ ಮೆಳ್ಳಹಳ್ಳಿ ಪ್ರಸ್ತುತದ ಅನೇಕ ಗ್ರಾಮಗಳ ಚಿತ್ರಣವನ್ನು ಬಿಂಬಿಸುತ್ತಿದೆ. ಈ ಗ್ರಾಮದ ಯುವಕರು ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದರು. ಆದರೆ, ಕರೊನಾ ಹಿನ್ನೆಲೆ ಊರಿಗೆ ಮರಳಿದ್ದಾರೆ. ತಮ್ಮೂರೆ ತಮಗೆ ಮೇಲು, ತಂದೆ-ತಾಯಿಯರೊಂದಿಗೆ ಕಾಲ ಕಳೆಯುವುದೇ ಶ್ರೇಷ್ಠ ಎಂದು ಹೇಳುತ್ತಾರೆ.

ಬರ, ಕೃಷಿ ವ್ಯವಸ್ಥೆ ಬುಡಮೇಲಾದ ಪರಿಸ್ಥಿತಿ, ಜಾನುವಾರುಗಳ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿರುವುದರಿಂದಾಗಿ ಗ್ರಾಮೀಣ ಭಾಗಗಳಲ್ಲಿ ಕೆಲಸವಿಲ್ಲದಂತಾಗಿದೆ. ಆಕರ್ಷಕ ಉದ್ಯೋಗ, ಸಂಬಳ ನೀಡಲು ಕೈ ಬೀಸಿ ಕರೆಯುತ್ತಿರುವ ಮಹಾನಗರಗಳತ್ತ ಚಿತ್ತ ನೆಟ್ಟು ಹುಟ್ಟಿದ ಊರನ್ನು ಬಿಟ್ಟು ಹೋಗಬೇಕಾಯಿತು. ಪಾಲಕರನ್ನು ಊರಲ್ಲೇ ಇರಿಸಿ ವಾರ, ತಿಂಗಳು, ಹಬ್ಬ ಹರಿದಿನಗಳಿಗೊಮ್ಮೆ ಊರಿಗೆ ಬರುವಂತಾಗಿತ್ತು. ಈಗ ಕರೊನಾ ಬಂದು ನಮ್ಮೂರೆ ನಮಗೆ ಮೇಲು ಎನ್ನುವುದನ್ನು ತಿಳಿಸಿತು ಎನ್ನುತ್ತಾರೆ.

ಕೃಷಿಯತ್ತ ಹರಿದ ಚಿತ್ತ:
ಕೃಷಿಗಿಂತ ಖಾಸಗಿ ಉದ್ಯೋಗ ಮೇಲು ಎಂದು ತೀರ್ಮಾನಿಸಿದ್ದ ಯುವಜನರು ಲಾಕ್‌ಡೌನ್ ಸಂದರ್ಭದಲ್ಲಿ ಮತ್ತೆ ವ್ಯವಸಾಯದತ್ತ ಹೊರಳಿದ್ದಾರೆ. ತಮ್ಮ ಪಾಲಕರಿಗೆ ಜಮೀನು ಕೆಲಸದಲ್ಲಿ ಸಹಾಯ ಮಾಡುತ್ತಾ, ಸ್ವಯಂ ಉದ್ಯೋಗದ ಮೌಲ್ಯವನ್ನು ಅರ್ಥೈಸಿಕೊಂಡು ಹಿಂದಿನ ಉದ್ಯೋಗ ಮತ್ತು ಇಂದಿನ ಕೃಷಿ ಕೆಲಸದ ನಡುವೆ ಯಾವುದು ಸರಿ ಎಂದು ಮೌಲ್ಯಮಾಪನ ಮಾಡುತ್ತಿದ್ದಾರೆ.

ಬೆಳೆಯುತ್ತಿರುವ ಮಹಾನಗರಗಳಲ್ಲಿ ಸ್ಥಾಪನೆಯಾಗುತ್ತಿರುವ ಕೈಗಾರಿಕೆಗಳು, ಕಾರ್ಖಾನೆಗಳು ಯುವಜನರನ್ನು ಮತ್ತೆಂದಿಗೂ ಸ್ವಗ್ರಾಮಗಳಿಗೆ ಮರಳಲು ಬಿಡದಿರುವ ಸನ್ನಿವೇಶ ಸೃಷ್ಟಿಯಾಗಿರುವಾಗ ಕರೊನಾ ಯುವಕರಿಗೆ ಸ್ವಾವಲಂಬಿ ಜೀವನದ ಬಗ್ಗೆ ತಿಳಿಸಿಕೊಟ್ಟಿದೆ.

ಹೊರಜಿಲ್ಲೆಗಳಿಂದ ವಾಪಸ್ಸಾದ ಯುವಕರು ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡಲು ಮುಂದಾಗುತ್ತಿದ್ದಾರೆ. ಪಾಲಕರಿಗೆ ಇತರೆ ಕೆಲಸಗಳಲ್ಲೂ ನೆರವಾಗುವ ಮೂಲಕ ಜವಾಬ್ದಾರಿಯುತ ಜೀವನ ನಡೆಸುತ್ತಿದ್ದಾರೆ.

ಅನಿವಾರ್ಯತೆಗಳು ನೀಗಬೇಕಿದೆ
ನಗರ ಬಿಟ್ಟು ಗ್ರಾಮಗಳಿಗೆ ಮರಳಿರುವ ಯುವಜನರಿಗೆ ಬದುಕಿನ ಅನಿವಾರ್ಯತೆಗಳನ್ನು ನೀಗಿಸಲು ಸೂಕ್ತ ಉದ್ಯೋಗ, ಜೀವನ ಭದ್ರತೆ ದೊರೆತರೆ ವಲಸೆಯನ್ನು ತಪ್ಪಿಸಬಹುದಾಗಿದೆ.

ಶೈಕ್ಷಣಿಕ ಅರ್ಹತೆ, ವಾಸಸ್ಥಳದ ವ್ಯಾಪ್ತಿಯನ್ನು ಆಧರಿಸಿ ಜಿಲ್ಲಾಡಳಿತ ಉದ್ಯೋಗ ನೀಡುವುದು, ಸ್ವಯಂ ಉದ್ಯೋಗದಲ್ಲಿ ತೊಡಗುವ ಆಸಕ್ತಿ ಹೊಂದಿರುವವರನ್ನು ಗುರುತಿಸಿ ಪ್ರೋತ್ಸಾಹ, ಮಾರ್ಗದರ್ಶನ ಮತ್ತು ಸಹಕಾರ ನೀಡಿದರೆ ಗ್ರಾಮಗಳಲ್ಲೇ ಯುವಜನರು ಉಳಿಯಲಿದ್ದಾರೆ. ಇಲ್ಲವಾದಲ್ಲಿ ಮತ್ತೆ ಬೆಂಗಳೂರು, ಮೈಸೂರಿನಂತ ಉದ್ಯೋಗ ಕ್ಷೇತ್ರಗಳಿರುವ ಜಿಲ್ಲೆಗಳು ತುಂಬಿಕೊಳ್ಳಲಿದೆ. ಹಳ್ಳಿಗಳ ಜಗುಲಿ ಕಟ್ಟೆಗಳ ಮೇಲೆ ಪಾಲಕರು ಮಕ್ಕಳು ಬರುವಿಕೆಯನ್ನೇ ಕಾಯುತ್ತಾ ಕೂರಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net