

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಕಲಬುರಗಿಯಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿಯವರ ಮೇಲೆ ಕಾಂಗ್ರೆಸ್ಸಿಗರು ಗೂಂಡಾಗಿರಿ ನಡೆಸಿದ್ದು ಅತ್ಯಂತ ಹೇಯ ಕೃತ್ಯ ಎಂದು ಮಾಜಿ ಸಿಎಂ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಖಂಡಿಸಿದ್ದಾರೆ.
ಸಾಂವಿಧಾನಿಕ ಹುದ್ದೆಯಾದ ವಿಪಕ್ಷ ನಾಯಕನ ಸ್ಥಾನದಲ್ಲಿರುವ ಶೋಷಿತ ಸಮುದಾಯಗಳ ನಾಯಕರೂ ಆದ ನಾರಾಯಣಸ್ವಾಮಿ ಅವರನ್ನು ಚಿತ್ತಾಪುರದ ಅತಿಥಿ ಗೃಹದಲ್ಲಿ ದಿಗ್ಬಂಧನದಲ್ಲಿರಿಸಿದ್ದ ಘಟನೆ ಅತ್ಯಂತ ಖಂಡನೀಯ. ಇದು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ.
ಚಲವಾದಿ ನಾರಾಯಣ ಸ್ವಾಮಿಯವರ ಕಾರಿನ ಮೇಲೆ ಮೊಟ್ಟೆ ಒಡೆದು, ಶಾಹಿ ಹಾಕಿ, ಬೆದರಿಕೆ ಹಾಕಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ ಸಾಂವಿಧಾನಿಕ ಹುದ್ದೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಮೇಲೆ ಗೌರವವಿದ್ದರೆ ಈ ಕೂಡಲೇ ಚಲವಾದಿ ನಾರಾಯಣಸ್ವಾಮಿ ಅವರಿಗೆ ಸೂಕ್ತ ಭದ್ರತೆ ಒದಗಿಸಿ ದಿಗ್ಬಂಧನ ವಿಧಿಸಿದ ಗೂಂಡಾಗಳ ಮೇಲೆ ಕಠಿಣ ಕ್ರಮ ಜರುಗಿಸಲಿ ಎಂದು ಆಗ್ರಹಿಸಿದ್ದಾರೆ.
ಭಯೋತ್ಪಾದಕರನ್ನು, ಗೂಂಡಾಗಳನ್ನು ಬೆಂಬಲಿಸುವ ಇವರ ನಡೆಯು ಅತ್ಯಂತ ಖಂಡನೀಯ. ಈ ಮನಸ್ಥಿತಿಯನ್ನು ಇನ್ನಾದರೂ ಕಾಂಗ್ರೆಸ್ಸಿಗರು ಬದಲಾಯಿಸಿಕೊಳ್ಳಲಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.