ಗುಹೆಯಲ್ಲೇ ಲೀನವಾದ ಮಹಾಯೋಗಿನಿ

KLB MATA MANIKESHWARI
Published on

ಕಲಬುರಗಿ: ಲೋಕ ಕಲ್ಯಾಣಕ್ಕಾಗಿ ಅಹಿಂಸಾ ತತ್ವ ಬೋಧಿಸಿದ ಮಹಾಯೋಗಿನಿ ಮಾತೆ ಮಾಣಿಕೇಶ್ವರಿ ಕೆಲ ಸಂದರ್ಭಗಳಲ್ಲಿ ಮಾತ್ರ ಭಕ್ತರಿಗೆ ದರ್ಶನ ನೀಡಿ ಆಶೀರ್ವದಿಸುತ್ತಿದ್ದರು. ಮಾಣಿಕ್ಯಗಿರಿಯಲ್ಲಿ ಐಕ್ಯಳಾಗಿರುವ ಮಾತೆ ಇನ್ಮುಂದೆ ರೂಪರಹಿತವಾಗಿ ಭಕ್ತರನ್ನು ಹರಸುತ್ತ ಲೀಲೆಗಳ ಮೂಲಕ ನಂಬಿಬಂದವರನ್ನು ಸಂಕಷ್ಟದಿಂದ ಪಾರು ಮಾಡಲಿದ್ದಾರೆ.
ಶನಿವಾರ ಶಿವೈಕ್ಯರಾದ ಮಾತೆ ಮಾಣಿಕೇಶ್ವರಿ ಲಿಂಗ ಶರೀರವನ್ನು ಮಾಣಿಕ್ಯಗಿರಿ ಬೆಟ್ಟದ ಗುಹೆಯಲ್ಲೇ ಲೀನವಾಗಿಸಲಾಯಿತು. ಸೋಮವಾರ ಅಂತಿಮ ವಿಧಾನ ಪೂರೈಸುವ ಮೂಲಕ ಲಕ್ಷಾಂತರ ಭಕ್ತರ ಅಶ್ರುತರ್ಪಣದೊಂದಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಮಾತೆಗೆ ಅಂತಿಮ ವಿದಾಯ ಹೇಳಲಾಯಿತು. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡುಗಳಿಂದ ಆಗಮಿಸಿದ್ದ ಅಸಂಖ್ಯ ಭಕ್ತರು ಅಮ್ಮನವರ ಅಂತಿಮ ದರ್ಶನ ಪಡೆದುಕೊಂಡರು.

ಅಮ್ಮನಿಲ್ಲದ ಗೋವುಗಳ ರೋದನ
ಅಹಿಂಸೆಯನ್ನೇ ಉಸಿರಾಗಿಸಿಕೊಂಡಿದ್ದ ಮಾತಾಜಿ, ಮಾಣಿಕ್ಯಗಿರಿಯಲ್ಲಿ ಅಸಂಖ್ಯ ಗೋವುಗಳನ್ನು ಸಹ ಸಾಕಿ ಗೋಶಾಲೆ ನಡೆಸುತ್ತಿದ್ದರು. ಈಗ ಅಮ್ಮನಿಲ್ಲದೆ ಇವುಗಳ ಮೂಕವೇದನೆ ಯಾರಿಗೂ ಹೇಳದಂತಾಗಿದೆ. ಅಮ್ಮ ಅವುಗಳ ಬಳಿಗೆ ನಿತ್ಯವೂ ಬರದಿದ್ದರೂ ಅಪಾರ ಪ್ರೀತಿ ಹೊಂದಿದ್ದರು. ಹಸುಗಳಿಗೆ ನಿತ್ಯ ನೀರು, ಮೇವಿನ ಕೊರತೆ ಆಗದಂತೆ ನೋಡಿಕೊಳ್ಳಲು ಚಂದ್ರಪ್ಪ ಇತರರು ಹಗಲುರಾತ್ರಿ ಎನ್ನದೆ ಹತ್ತಾರು ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿದ್ದಾರೆ.

ಬಾರದ ಸಿಎಂ-ಡಿಸಿಎಂ
ಚವ್ಹಾಣ್ ಜತೆ ವಾಗ್ವಾದ
ಮಾತೆ ಮಾಣಿಕೇಶ್ವರಿ ಅಮ್ಮನವರ ಅಂತಿಮ ದರ್ಶನ ಪಡೆಯಲು ಮತ್ತು ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಿಸಿಎಂ ಗೋವಿಂದ ಕಾರಜೋಳ ಮೊದಲಾದವರು ಬರದೆ ಕಡೆಗಣಿಸಿದ್ದಾರೆ ಎಂದು ಸಕರ್ಾರದ ಪ್ರತಿನಿಧಿಯಾಗಿ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿದ್ದ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರನ್ನು ಭಕ್ತರು ತರಾಟೆಗೆ ತೆಗೆದುಕೊಂಡರು. ಮಾತಾಜಿ ಶ್ರೇಷ್ಠ ದೇಹವನ್ನು ಮಹಾ ಮಂದಿರದಿಂದ ಅಂತ್ಯಕ್ರಿಯೆ ನಡೆಸಲು ಗುಹೆಯೊಳಗೆ ಕೊಂಡೊಯ್ದ ಸಂದರ್ಭದಲ್ಲಿ ಆವರಣದಲ್ಲಿದ್ದ ಸಚಿವ ಚವ್ಹಾಣ್ ಬಳಿ ಹೋದ ಕೋಲಿ ಸಮಾಜದ ಮುಖಂಡರಾದ ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ, ಬಸವರಾಜ ಬೂದಿಹಾಳ, ಭೀಮಣ್ಣ ಸಾಲಿ, ರಮೇಶ, ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ್ ಇತರರು ಸಿಎಂ ಹಾಗೂ ಡಿಸಿಎಂ ಬರದೆ ಅಮ್ಮನವರ ಭಕ್ತರ ಭಾವನೆಗೆ ಧಕ್ಕೆ ತಂದಿದ್ದಾರೆ. ಆ ಭಾಗದ ಧಾಮರ್ಿಕ ನಾಯಕರು ಲಿಂಗೈಕ್ಯರಾದರೆ ಹೋಗಲು ಸಮಯವಿರುತ್ತದೆ, ಇಲ್ಲಿಗೆ ಬರಲು ಸಮಯ ಇಲ್ಲವೇನು ಎಂದು ಖಾರವಾಗಿ ಪ್ರಶ್ನಿಸಿದರು. ಇದರಿಂದಾಗಿ ಕೆಲಕಾಲ ಮಾತಿನ ಚಕಮಕಿ ನಡೆಯಿತು. ವಾಗ್ವಾದ ನಡುವೆಯೇ ಸಚಿವರು, ಸಿಎಂ ಸೂಚನೆಯಂತೆ ಬಂದಿದ್ದೇನೆ. ನಿಮ್ಮ ಭಾವನೆಗಳನ್ನು ಅವರಿಗೆ ತಿಳಿಸುವ ಪ್ರಯತ್ನ ಮಾಡುತ್ತೇನೆ ಎಂದು ಸಮಜಾಯಿಷಿ ನೀಡಿದರು.


ಪಾದಯಾತ್ರೆ ಮೂಲಕ ಆಗಮಿಸಿದ ಭಕ್ತರು
ಗುರುಮಠಕಲ್ ಖಾಸಾಮಠ ಶ್ರೀಗಳ ನೇತೃತ್ವದಲ್ಲಿ ಸಾವಿರಾರು ಭಕ್ತರು ಮಾಣಿಕೇಶ್ವರಿ ಅಮ್ಮನವರ ಅಂತಿಮ ದರ್ಶನ ಪಡೆಯಲು ಸೋಮವಾರ ಮಾಣಿಕ್ಯಗಿರಿಗೆ ಪಾದಯಾತ್ರೆ ಮೂಲಕ ಆಗಮಿಸಿದರು. ಬಿಸಿಲಲ್ಲೇ ಶಿವ ಸ್ಮರಣೆ, ಮಾತಾಜಿಯರ ಭಜನೆ ಮಾಡುತ್ತ ಆಗಮಿಸಿ ಅಂತಿಮ ದರ್ಶನ ಪಡೆದರು. ಮಾಣಿಕಮ್ಮನವರನ್ನು ನೋಡಿದ್ದೇವೆ ಎಂಬುದೇ ನಮ್ಮ ದೊಡ್ಡ ಪುಣ್ಯ. ಅಂತಹ ಮಹಾಯೋಗಿನಿಗೆ ಅಂತಿಮ ನಮನ ಸಲ್ಲಿಸಿದ್ದೇವೆ. ಆ ತಾಯಿ ಕೃಪೆ ನಮ್ಮ ಮೇಲಿರುತ್ತದೆ ಎಂದು ಭಕ್ತರು ಹೇಳಿಕೊಂಡರು. ವಿಶ್ವಗುರು ಬಸಣ್ಣನವರ ತತ್ವ ಅನುಸರಿಸುತ್ತಿದ್ದ ಮಾತಾಜಿ, ಅಹಿಂಸೆಯನ್ನು ಬೋಧಿಸಿದರು. ಅವರೊಬ್ಬ ಮಹಾನ್ ದೈವಿ ಸ್ವರೂಪಿ ಆಗಿದ್ದರು ಎಂದು ಖಾಸಮಠ ಶ್ರೀಗಳು ತಿಳಿಸಿದರು.

ದರ್ಶನಕ್ಕೆ ಬಂದ ಕಂದಮ್ಮಗಳು
ಅಂತಿಮ ದರ್ಶನಕ್ಕೆ ಬಂದಿದ್ದ ಅನೇಕ ಮಹಿಳೆಯರು, ಮಾತಾಜಿ ಲಿಂಗ ಶರೀರದ ಮೇಲೆ ತಮ್ಮ ಕಂದಮ್ಮಗಳನ್ನು ಮಲಗಿಸಿ ಕೃಪೆಗೆ ಪಾತ್ರರಾದರು. ಬಂದೋಬಸ್ತ್ಗೆ ನಿಯೋಜನೆಗೊಂಡ ಪೊಲೀಸರು ಕಂದಮ್ಮಳನ್ನು ತೆಗೆದುಕೊಂಡು ಮಾತೆಯಿದ್ದ ಡಿ ಫ್ರೀಜರ್ ಗಾಜಿಗೆ ಹಣೆ ಹಚ್ಚಿ ಕೊಡುವಂಥ ಪುಣ್ಯದ ಕೆಲಸ ಮಾಡಿದರು. ಇನ್ನು ನಾನಾ ಕಡೆಗಳಿಂದ ಆಗಮಿಸಿದ್ದ ಭಕ್ತರು ತಮ್ಮೊಂದಿಗೆ ಚಿಕ್ಕ-ಪುಟ್ಟ ಮಕ್ಕಳನ್ನೂ ಕರೆತಂದರು. ಮಕ್ಕಳು ಹೆತ್ತವರ ಮತ್ತು ಅಜ್ಜಿಯರ ಹೆಗಲ ಮೇಲೆ ಕುಳಿತು ಮಾತೆಗೆ ನಮನ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net