ಗುಹೆಯಲ್ಲಿ ಪುಟಾಣಿಗಳ ಕಲಿಕೆ!, ಜಿಲ್ಲೆಯಲ್ಲಿ ಮೈದೆಳೆಯುತ್ತಿದೆ ಮಾದರಿ ಅಂಗನವಾಡಿ. ಶಾಲಾ ಪೂರ್ವ ಶಿಕ್ಷಣಕ್ಕೆ ಮಕ್ಕಳ ಸೆಳೆಯುವ ಪ್ರಯೋಗ

44
Published on

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ಸರ್ಕಾರಿ ಶಾಲೆಗಳ ದಾಖಲಾತಿ ಮೂಲವಾಗಿರುವ ಅಂಗನವಾಡಿಗಳಿಗೆ ಹೈಟೆಕ್ ಸ್ಪರ್ಶ ನೀಡುತ್ತಿರುವ ಗ್ರಾಮಾಂತರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಾಜ್ಯದಲ್ಲೇ ಮೊದಲ ಬಾರಿಗೆ ಗುಹೆ ಮಾದರಿಯ ಅಂಗನವಾಡಿ ನಿರ್ಮಾಣಕ್ಕೆ ಮುಂದಾಗಿದೆ. ಈ ಅಂಗನವಾಡಿ ಹಲವು ವಿಶೇಷತೆ ಒಳಗೊಂಡಿದೆ. ಪುಟ್ಟ ಮನಸ್ಸುಗಳಿಗೆ ಆಹ್ಲಾದ ನೀಡುವ, ಆಟದೊಂದಿಗೆ ಪಾಠ ಕಲಿಸುವ ವಿನೂತನ ಯೋಜನೆಯೊಂದಿಗೆ ಈ ಕಟ್ಟಡ ನಿರ್ಮಾಣವಾಗುತ್ತಿದೆ.

ಖಾಸಗಿ ಪ್ಲೇಹೋಂಗಳಲ್ಲಿನ ವಿನೂತನ ಪ್ರಯೋಗಗಳಿಗಿಂತ ಒಂದು ಕೈ ಮೇಲೆ ಎಂಬಂತೆ ನಿರ್ಮಾಣವಾಗುತ್ತಿರುವ ಈ ಗುಹೆ ಮಾದರಿಯ ಮಾದರಿ ಅಂಗನವಾಡಿ ರಾಜ್ಯದ ಇನ್ನಿತರ ಅಂಗನವಾಡಿಗಳ ಪೈಕಿ ವಿಶೇಷವಾಗಿ ಗಮನ ಸೆಳೆಯುತ್ತಿದೆ. ದೊಡ್ಡಬಳ್ಳಾಪುರ ತಾಲೂಕು ರಾಜಘಟ್ಟ ಪಂಚಾಯಿತಿ ವ್ಯಾಪ್ತಿಯ ತಿಮ್ಮಸಂದ್ರದಲ್ಲಿ ಈ ಅಂಗನವಾಡಿ ನಿರ್ಮಾಣವಾಗುತ್ತಿದ್ದು, ಜೂನ್ ಮೊದಲ ವಾರದಲ್ಲಿ ಉದ್ಘಾಟಿಸಲು ಸಿದ್ಧತೆ ನಡೆದಿದೆ.

ಖಾಸಗಿ ಪ್ಲೇಹೋಂಗಳಿಗೆ ಸೆಡ್ಡು: ಅಂಗನವಾಡಿಗಳೆಂದರೆ ಮೂಲಸೌಕರ್ಯವಿಲ್ಲದೆ ಹಾಳು ಕಟ್ಟಡವೊಂದರಲ್ಲಿ ನಡೆಯುವ ಕಾಟಾಚಾರದ ಶಿಕ್ಷಣವೆಂಬ ಭಾವನೆ ಸಾಮಾನ್ಯವಾಗಿದೆ. ಆರ್ಥಿಕವಾಗಿ ತೀರ ಹಿಂದುಳಿದ ಪಾಲಕರು ಗತ್ಯಂತರವಿಲ್ಲದೆ ಅಂಗನವಾಡಿಗಳಿಗೆ ಸೇರಿಸುತ್ತಾರೆ ಎಂಬ ಮಾತು ಸಹಜವಾಗಿದೆ. ಆದರೆ ಇದಕ್ಕೆ ವ್ಯತಿರಿಕ್ತ ಎಂಬಂತೆ ಜಿಲ್ಲೆಯಲ್ಲಿ ಖಾಸಗಿ ಪ್ಲೇಹೋಂಗಳಿಗೆ ಕಡಿಮೆ ಇಲ್ಲದಂತೆ ಮಾದರಿ ಅಂಗನವಾಡಿ ನಿರ್ಮಾಣವಾಗುತ್ತಿದೆ. ಗುಹೆ ಮಾದರಿಯಲ್ಲಿ ಸುಸಜ್ಜಿತ ಕಟ್ಟಡ, ಸುತ್ತಲೂ ಗಾಳಿ ಬೆಳಕಿಗೆ ಕೊರತೆಯಿಲ್ಲದಂತೆ ಕಿಟಕಿಗಳ ನಿರ್ಮಾಣ, ತಂಪಾದ ವಾತಾವರಣ ಸೃಷ್ಟಿಸುವ ತಾಂತ್ರಿಕತೆ ಬಳಕೆ, ಪ್ರತ್ಯೇಕ ಅಡುಗೆ ಕೊಠಡಿ, ಕಲಿಕಾ ಸಾಮಗ್ರಿಗಳ ದಾಸ್ತಾನು ಕೊಠಡಿ, ಶೌಚಗೃಹ ಸೇರಿ ಎಲ್ಲವನ್ನು ಒಂದೇ ಸೂರಿನಡಿ ತರುವ ಪ್ರಯತ್ನ ಇದಾಗಿದೆ.

ಪಾಲಕರ ಗಮನ ಸೆಳೆಯುವ ಪ್ರಯತ್ನ: ಮಕ್ಕಳ ಬಾಲ್ಯಾವಸ್ಥೆಯ ಕಲಿಕೆ ಸಮಯದಲ್ಲಿ ಮಾನಸಿಕ ಮತ್ತು ಬೌದ್ಧಿಕ ಶಕ್ತಿ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ಅಂಗನವಾಡಿಗಳಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ನವೀನ ಮಾದರಿಯ ಸೌಕರ್ಯಗಳನ್ನು ಒದಗಿಸಿದರೆ ಪುಟಾಣಿಗಳು ಉಲ್ಲಸಿತರಾಗುತ್ತಾರೆ. ಅಂಗನವಾಡಿ ಶಿಕ್ಷಕರಿಗೆ ತರಬೇತಿ, ಮಕ್ಕಳಿಗೆ ಪೂರಕ ಸಂಪನ್ಮೂಲ ವ್ಯವಸ್ಥೆ, ನೆಲಹಾಸು, ಆಸನಗಳ ವ್ಯವಸ್ಥೆ, ಕಲಿಕಾ ಸಾಮಗ್ರಿಗಳ ಪೂರೈಕೆ ಹೀಗೆ ವಿಶೇಷ ವ್ಯವಸ್ಥೆ ಕಲ್ಪಿಸಿದರೆ ಪಾಲಕರು ಸಹ ಮಕ್ಕಳನ್ನು ಅಂಗನವಾಡಿಗೆ ಸೇರಿಸಲು ಮುಂದಾಗುತ್ತಾರೆ ಎಂಬುದು ಇಲಾಖೆ ಚಿಂತನೆಯಾಗಿದೆ.

ಸಿಎಸ್‌ಆರ್ ಬಲ: ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಲಿಟಿ(ಸಿಎಸ್‌ಆರ್) ನಿಧಿಯಡಿ ಸುಮಾರು 22 ಲಕ್ಷ ರೂ.ವೆಚ್ಚದಲ್ಲಿ ಈ ಅಂಗನವಾಡಿ ನಿರ್ಮಾಣವಾಗುತ್ತಿದೆ. ಕೈಗಾರಿಕೆಗಳು ಆದ್ಯತೆ ಮೇರೆಗೆ ಅಂಗನವಾಡಿ ಮತ್ತು ಸರ್ಕಾರಿ ಶಾಲಾ ಕಟ್ಟಡಗಳಿಗೆ ನೆರವು ನೀಡಿದರೆ ಸಾವಿರಾರು ಮಕ್ಕಳ ಭವಿಷ್ಯಕ್ಕೆ ಸುಸಜ್ಜಿತ ವ್ಯವಸ್ಥೆ ಕಲ್ಪಿಸಿದಂತಾಗುತ್ತದೆ ಎಂಬ ನಿಟ್ಟಿನಲ್ಲಿ ಇಲಾಖೆ ಪ್ರಸ್ತಾವನೆಗೆ ಸಿಎಸ್‌ಆರ್ ಅನುದಾನ ವಿನಿಯೋಗವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

133 ಬಾಡಿಗೆ ಕಟ್ಟಡ: ಜಿಲ್ಲೆಯ 4 ತಾಲೂಕುಗಳಲ್ಲಿ 1230 ಅಂಗಡನಾಡಿ ಕಟ್ಟಡಗಳ ಪೈಕಿ 133 ಕಡೆ ಬಾಡಿಗೆ ಕಟ್ಟಡಗಳಲ್ಲಿ ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿವೆ, ಬಹುತೇಕ ಅಂಗನವಾಡಿಗಳಿಗೆ ಸುಸಜ್ಜಿತ ಕೊಠಡಿಗಳೇ ಇಲ್ಲದಂತಾಗಿವೆ. ಇದರಿಂದ ನಿತ್ಯ ಮಕ್ಕಳ ಕಲಿಕೆಗೆ ಮಾತ್ರವಲ್ಲದೆ ಗರ್ಭಿಣಿ, ಬಾಣಂತಿಯರ ಪೌಷ್ಟಿಕ ಆಹಾರ ಪೂರೈಕೆಯಲ್ಲಿ ಅನೇಕ ಸಮಸ್ಯೆಗಳಿವೆ, ಇದರ ನಡುವೆ ಇಂಥಹದ್ದೊಂದು ಪ್ರಯೋಗ ಭವಿಷ್ಯದಲ್ಲಿ ಎಲ್ಲ ಅಂಗನವಾಡಿಗಳಿಗೂ ಹೈಟೆಕ್ ಸ್ಪರ್ಷ ಸಿಗುವ ನಿರೀಕ್ಷೆ ಮೂಡಿಸಿದೆ.

ಶಾಲಾ ಪೂರ್ವ ಶಿಕ್ಷಣದಡಿ ಮಕ್ಕಳನ್ನು ಆಕರ್ಷಿಸಲು ಹಾಗೂ ಪಾಲಕರನ್ನು ಸೆಳೆಯುವ ನಿಟ್ಟಿನಲ್ಲಿ ಇಲಾಖೆಯ ಉಪನಿರ್ದೇಶಕರ ಸಹಕಾರದೊಂದಿಗೆ ಈ ಮಾಡೆಲ್ ಅಂಗನವಾಡಿ ವಿನೂತನ ಪ್ರಯೋಗವಾಗಿದೆ. ಇದಕ್ಕೆ ಸಿಎಸ್‌ಆರ್ ಅನುದಾನ ಸದ್ಭಳಕೆ ಮಾಡಿಕೊಂಡಿದ್ದು, ಇಂಥ ವಿಶೇಷ ಮಾದರಿ ರಾಜ್ಯದಲ್ಲೇ ಮೊದಲ ಪ್ರಯೋಗ ಎನ್ನಬಹುದಾಗಿದೆ. ಮತ್ತಷ್ಟು ಇಂತ ಪ್ರಯೋಗಾತ್ಮಕ ಅಂಗನವಾಡಿ ನಿರ್ಮಾಣಕ್ಕೆ ಪ್ರಯತ್ನ ನಡೆಯುತ್ತಿದೆ. ಅನಿತಾಲಕ್ಷ್ಮೀ, ಶಿಶುಅಭಿವೃದ್ಧಿ ಅಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net