

ಗುಳೇದಗುಡ್ಡ: ಗಣರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಬೇಕು ಎಂದು ತಹಸೀಲ್ದಾರ್ ಮಂಗಳಾ ಎಂ. ಹೇಳಿದರು.
ಪಟ್ಟಣ ತಹಸೀಲ್ದಾರ್ ಕಚೇರಿಯಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಆಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಆಯಾ ಇಲಾಖೆ ಅಧಿಕಾರಿಗಳು ಒಂದೊಂದು ಜವಾಬ್ದಾರಿ ವಹಿಸಿಕೊಳ್ಳಬೇಕು. ಸಣ್ಣಪುಟ್ಟ ತಪ್ಪುಗಳು ಸಹ ನಡೆಯದಂತೆ ಎಲ್ಲರೂ ಗಮನವಹಿಸಿ ಕೆಲಸ ಮಾಡೋಣ ಎಂದರು.
ಬೆಳಗ್ಗೆ 8:45ರೊಳಗಾಗಿ ತಮ್ಮ ತಮ್ಮ ಕಚೇರಿಗಳ ಧ್ವಜಾರೊಹಣ ನೆರವೇರಿಸಿ, ತಾಲೂಕು ಧ್ವಜಾರೋಹಣಕ್ಕೆ ಆಗಮಿಸಬೇಕು. ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ಎ.ಎಸ್.ಮುಜಾವರ ಮಾತನಾಡಿ, ಕಳೆದ 3-4 ಬಾರಿ ಶಾಮಿಯಾನ ಜವಾಬ್ದಾರಿಯನ್ನು ನಮಗೆ ಹಾಗೂ ಅರಣ್ಯ ಇಲಾಖೆಯವರಿಗೆ ವಹಿಸಲಾಗಿತ್ತು. ಆದರೆ ಅರಣ್ಯ ಇಲಾಖೆಯವರು ಸರಿಯಾಗಿ ಸ್ಪಂದಿಸಲಿಲ್ಲ. ಆದ್ದರಿಂದ ಈ ಬಾರಿ ಆಯಾ ಇಲಾಖೆಗಳಿಗೆ ಒಂದೊಂದು ಜವಾಬ್ದಾರಿ ವಹಿಸಿ ಎಂದು ಮನವಿ ಮಾಡಿದರು.
ವಿಶೇಷ ತಹಸೀಲ್ದಾರ್ ಮಹೇಶ ರಸ್ತೆ, ಕೃಷಿ ಇಲಾಖೆ ಆನಂದ ಗೌಡರ, ಉಪನೋಂದಣಾಧಿಕಾರಿ ಮಹಾಂತೇಶ ಗಾಣಿಗೇರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಂ.ಎಂ. ಮಳ್ಳಿಮಠ, ನೀರಾವರಿ ಇಲಾಖೆಯ ಮಂಜುನಾಥ ತಳವಾರ, ಬಾಲಕರ ಕಾಲೇಜಿನ ಪ್ರಾಚಾರ್ಯ ವಿಠ್ಠಲ ಕಳಸಾ, ಪೊಲೀಸ್ ಇಲಾಖೆಯ ಕಲಾಲ, ಶಿಕ್ಷಣ ಇಲಾಖೆಯ ಉಂಕಿ, ಜ್ಯೋತಿ ಆಲೂರ ಇದ್ದರು.