

ಚನ್ನರಾಯಪಟ್ಟಣ: ತಾಲೂಕಿಗೆ ಕಾಡುತ್ತಿರುವ ಬರಗಾಲವನ್ನು ಎದುರಿಸುವ ನಿಟ್ಟಿನಲ್ಲಿ ಪ್ರಮುಖವಾಗಿ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳ ಪಾತ್ರ ಬಹು ದೊಡ್ಡದಿದೆ. ಇಲಾಖೆಗಳಲ್ಲಿ ಇರುವ ಕಾರ್ಯಕ್ರಮಗಳ ಪೈಕಿ ನರೇಗಾದಡಿ ವೈಯಕ್ತಿಕ ಕಾಮಗಾರಿಗೆ ಆದ್ಯತೆ ನೀಡಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಇಲ್ಲಿನ ಪುರಸಭಾ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಗಳಿಂದ ಪ್ರಗತಿಯ ವರದಿ ಕೇಳಿದ ನಂತರ ಮಾತನಾಡಿದ ಅವರು, ತಾಲೂಕಿನಲ್ಲಿ ಬರವಿದ್ದು, ರೈತರು ಮಳೆ, ಬೆಳೆ ಕಂಡಿಲ್ಲ, ಅವರು ಗುಳೇ ಹೋಗುವುದನ್ನು ತಪ್ಪಿಸುವ ಸಲುವಾಗಿ ನರೇಗಾದಡಿ ವೈಯಕ್ತಿಕ ಕಾಮಗಾರಿಗೆ ಹೆಚ್ಚಿನ ಆದ್ಯತೆ ನೀಡಿ. ಅರ್ಥಿಕತೆಯ ಶಕ್ತಿಯೊಂದಿಗೆ ಅಧಿಕಾರಿಗಳು ಬರಗಾಲದ ಸೇವೆಗೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಪಂಚಾಯಿತಿ ಪಿಡಿಒಗಳು ಹೆಚ್ಚು ಸಕ್ರಿಯವಾಗುವಂತೆ ನೋಡಿಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹರೀಶ್ ಅವರಿಗೆ ಸೂಚಿಸಿದರು.
ಕೃಷಿ ಇಲಾಖೆ ಅಧಿಕಾರಿ ರಶ್ಮಿ ಅವರಿಂದ ತಾಲೂಕಿಗೆ ನೀಡಲಾಗಿರುವ ಸ್ಪ್ರಿಂಕ್ಲರ್ ಸೆಟ್‌ಗಳ ಮಾಹಿತಿ ಪಡೆದ ಶಾಸಕರು, ಕಳೆದ ಸಾಲಿನಲ್ಲಿ ಬೇಡಿಕೆ ಇದ್ದ 4,045 ಸೆಟ್‌ಗಳ ಪೈಕಿ 2,300 ಸೆಟ್‌ಗಳ ವಿತರಣೆ ಆಗಿದೆ. ಬಾಕಿ ಸೆಟ್‌ಗಳ ವಿತರಣೆಯನ್ನು ಇನ್ನೊಂದು ವಾರದಲ್ಲಿ ವಿತರಣೆಗೆ ಕ್ರಮವಹಿಸಿ ಇದರಿಂದ ನೀರಿನ ಲಭ್ಯತೆ ಇರುವ ರೈತರಾದರೂ ಬರದ ವೇಳೆ ಕೃಷಿಯಲ್ಲಿ ತೊಡಗಲು ಅನುಕೂಲವಾಗುತ್ತದೆ ಎಂದ ಅವರು, ರೇಷ್ಮೆ, ತೋಟಗಾರಿಕೆ, ಕೃಷಿ ಇಲಾಖೆಗೆ ನಿಗದಿತ ಅನುದಾನ ಬರುತ್ತಿಲ್ಲ. ಇದರೊಂದಿಗೆ ಯಾವ್ಯಾವ ಇಲಾಖೆಗಳಲ್ಲಿ ಅನುದಾನ ಸೇರಿದಂತೆ ಅವಶ್ಯವಿರುವ ಕೆಲಸಗಳಿಗೆ ನೀವು ಪತ್ರ ಬರೆದರೆ ಸಾಲದು, ಶಾಸಕರ ಪತ್ರವನ್ನು ಲಗತ್ತಿಸಿ, ಇದರಿಂದ ಅನುದಾನ ತರಲು ಶ್ರಮಿಸಬಹುದು ಎಂದು ಹೇಳಿದರು.
ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಹೇಶ್ ಮಾತನಾಡಿ, ಬೀದಿನಾಯಿಗಳ ಹಾವಳಿ ಹೆಚ್ಚಿದ್ದು, ಕಳೆದ ಒಂದು ವರ್ಷದಲ್ಲಿ 2,942 ನಾಯಿ ಕಚ್ಚಿದ ಪ್ರಕರಣಗಳು ದಾಖಲಾಗಿವೆ. ಆದ್ದರಿಂದ ಪುರಸಭೆಯವರಿಗೆ ಬೀದಿನಾಯಿ ಹತೋಟಿಗೆ ತರಲು ಸೂಚಿಸುವಂತೆ ಮನವಿ ಮಾಡಿದರು. ಆಗ ಶಾಸಕರು ಪ್ರತಿಕ್ರಿಯಿಸಿ, ಬೀದಿನಾಯಿಗಳ ಸಂತಾನಶಕ್ತಿ ಹರಣಕ್ಕೆ ಮುಂದಾದರೆ ಪ್ರಾಣಿದಯಾ ಸಂಘದವರ ಹೋರಾಟ ಮಾಡುತ್ತಾರೆ. ಸಮಸ್ಯೆ ಜಟಿಲವಾಗಿದ್ದು, ಇದಕ್ಕೆ ರಾಜ್ಯದ ಮುಖ್ಯಮಂತ್ರಿ ಅವರೇ ಪರಿಹಾರ ಸೂಚಿಸಬೇಕು. ಈ ಕುರಿತಾಗಿ ಸದನಲ್ಲಿಯೂ ಮನವಿ ಮಾಡಲಾಗುವುದು ಎಂದರು.
ಯಶಸ್ವಿನಿ ಕಾರ್ಡ್ ಮಾಡಿಸಿಕೊಳ್ಳಿ: ಸಹಕಾರ ಇಲಾಖೆಯಡಿ ತಾಲೂಕಿನ 29 ರೈತರು ಯಶ್ವಸಿನಿ ಆರೋಗ್ಯ ವಿಮೆ ಹೊಂದಿದ್ದು, 10 ಸಾವಿರ ಜನರಿಗೆ ಕಾರ್ಡ್ ಹಂಚಿಕೆಯಾಗಿ ಮೂರು ಸಾವಿರ ಜನರು ಚಿಕಿತ್ಸಾ ವೆಚ್ಚ ಪಡೆದಿದ್ದಾರೆ. ಕಾರ್ಡ್ ಮಾಡಿಸಿಕೊಳ್ಳುವವರು ಯಶಸ್ವಿನಿ ಯೋಜನೆಯ ಜಿಲ್ಲಾ ಸಮನ್ವಯಾಧಿಕಾರಿ ಮೊ: 8951144831ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಸಹಕಾರ ಇಲಾಖೆ ಅಧಿಕಾರಿ ತಿಳಿಸಿದರು.
ಪಡಿತರ ಹಂಚಿಕೆಗೆ ಕಮಿಷನ್: ಪಡಿತರ ಹಂಚಿಕೆಯಲ್ಲಿ ಪ್ರತಿ ಕ್ವಿಂಟಾಲ್‌ಗೆ 125 ರೂ. ಕಮಿಷನ್ ನೀಡುತ್ತಿದ್ದು, ಅಲ್ಲಲ್ಲಿ ಕಾಲು, ಅರ್ಧ ಕೆಜಿ ಅಕ್ಕಿ ಹಿಡಿಯುವ ದೂರುಗಳು ಕೇಳಿಬರುತ್ತಿವೆ. ಒಂದು ಕಾಳೂ ಅಕ್ಕಿ ಹಿಡಿಯದಂತೆ ಸೊಸೈಟಿದಾರರಿಗೆ ನಿರ್ದೇಶನ ನೀಡುವಂತೆ ಆಹಾರ ನಿರೀಕ್ಷಕರಿಗೆ ಸೂಚಿಸಿದ ಶಾಸಕರು ಸಭೆಗೆ ಬಾರದ ಅಂಬೇಡ್ಕರ್ ಅಭಿವೃದ್ದಿ ನಿಗಮ ಮತ್ತು ಡಿ.ದೇವರಾಜು ಅರಸು ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ತಾಲೂಕು ಪಂಚಾಯಿತಿ ಇಒಗೆ ಸೂಚಿಸಿದರು.
ಸಭೆಯಲ್ಲಿ ತಹಸೀಲ್ದಾರ್‌ಸಿ.ಜೆ.ಗೀತಾ, ತಾಪಂ ಇಒ ಜಿ.ಆರ್.ಹರೀಶ್, ಪುರಸಭೆ ಮುಖ್ಯಾಧಿಕಾರಿ ಕೆ.ಎನ್.ಹೇಮಂತ್, ಟಿಎಪಿಸಿಎಂಎಸ್ ಅಧ್ಯಕ್ಷ ರಮೇಶ್ ಕುಂಬಾರಹಳ್ಳಿ ಇದ್ದರು.
ಚನ್ನರಾಯಪಟ್ಟಣದಲ್ಲಿನ ಪುರಸಭೆಯಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಕೆಡಿಪಿ ಸಭೆಯಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿದರು. ಸಿ.ಜೆ.ಗೀತಾ, ಜಿ.ಆರ್.ಹರೀಶ್, ಕೆ.ಎನ್.ಹೇಮಂತ್, ರಮೇಶ್ ಕುಂಬಾರಹಳ್ಳಿ ಇದ್ದರು.