

ಬಸವಕಲ್ಯಾಣ: ಜನರು ಗುಳೆ ಹೋಗದಂತೆ ತಡೆಯಲು ಮಹಾತ್ಮಗಾಂಧಿ ರಾಷ್ಟಿಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು. ಸ್ವಾವಲಂಬಿ ಜೀವನ ನಡೆಸಬೇಕು ಎಂದು ತಾಪಂ ತಾಂತ್ರಿಕ ಸಂಯೋಜಕ ಶಿವರಾಜ ಪಾಟೀಲ್ ಹೇಳಿದರು.
ಕಿಟ್ಟಾದಲ್ಲಿ ಮಂಗಳವಾರ ಏರ್ಪಡಿಸಿದ್ದ ರೋಜಗಾರ್ ದಿವಸ್ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಅರ್ಜಿ ೬ರ ನಮೂನೆಯಲ್ಲಿ ಬೇಡಿಕೆ ಸಲ್ಲಿಸಿದರೆ ೧೫ ದಿನದೊಳಗೆ ಪ್ರತಿ ಕುಟುಂಬಕ್ಕೆ ೧೦೦ ದಿನ ಉದ್ಯೋಗ ನೀಡಲಾಗುತ್ತದೆ ಎಂದರು.
ಉದ್ಯೋಗ ಖಾತ್ರಿ ಯೋಜನೆಯಡಿ ವೈಯಕ್ತಿಕ ಮತ್ತು ಸಮುದಾಯ ಎಂಬ ಎರಡು ರೀತಿ ಕೆಲಸ ಮಾಡಲು ಅವಕಾಶ ಇದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ವೃದ್ಧರಿಗೆ, ವಿಶೇಷ ಚೇತನರಿಗೆ, ಗರ್ಭಿಣಿಯರಿಗೆ ಕೆಲಸದಲ್ಲಿ ರಿಯಾಯಿತಿ ನೀಡಲಾಗಿದೆ. ಗ್ರಾಮಸ್ಥರು ಬೇರೆ ಜಿಲ್ಲೆಗೆ ಹೋಗದೆ ಗ್ರಾಮದಲ್ಲಿ ಉಳಿದು ಲಾಭ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಪಂ ಐಇಸಿ ಸಂಯೋಜಕ ವೀರಾರೆಡ್ಡಿ ಮಾತನಾಡಿದರು. ಗ್ರಾಮಸ್ಥರ ಮನೆ-ಮನೆಗೆ ತೆರಳಿ ಉದ್ಯೋಗ ಖಾತ್ರಿ ಯೋಜನೆ ಜಾಗೃತಿ ಮೂಡಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಜುರೆಡ್ಡಿ ಕುದಗೆ, ಮಾಜಿ ಅಧ್ಯಕ್ಷ ಬಾಬುರಾವ, ಸದಸ್ಯರಾದ ಮುಕುಂದ, ವಿಶಾಲ, ತುಕಾರಾಮ, ಪಿಡಿಒ ರಮೇಶಕುಮಾರ ಕಾಂಬ್ಳೆ ಇತರರಿದ್ದರು.