ಗುರುಶಿಷ್ಯರು ಟ್ರೇಲರ್ ಬಿಡುಗಡೆ, ವೃತ್ತಿ ಜೀವನದಲ್ಲಿ ಸಾರ್ಥಕತೆ ನೀಡಿದ ಸಿನಿಮಾ-ನಟ ಶರಣ್

IMG-20220916-WA0044.jpg
Published on
ದಾವಣಗೆರೆ: ಗುರುಶಿಷ್ಯರು-ನನ್ನ ಪ್ರೊಡಕ್ಷನ್‌ನಲ್ಲಿ ಮೂಡಿ ಬಂದ ಮೂರನೇ ಸಿನಿಮಾ. ಖೋ-ಖೋ ಆಟದ ಮೇಲೆ ಕನ್ನಡದಲ್ಲಿ ಮೊದಲ ಬಾರಿಗೆ ನಿರ್ಮಾಣವಾದ ಚಿತ್ರವಾಗಿದೆ ಎಂದು ಚಿತ್ರನಟ ಶರಣ್ ಹೇಳಿದರು.
ನಗರದ ಪೂಜಾ ಇಂಟರ್‌ನ್ಯಾಷನಲ್ ಹೋಟೆಲ್‌ನಲ್ಲಿ ಶುಕ್ರವಾರ, ಗುರು-ಶಿಷ್ಯರು ಚಿತ್ರದ ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿದರು. ಖೋ ಖೋ ಈ ನೆಲದ ಆಟ. ಈ ಮಣ್ಣು, ಸಂಸ್ಕೃತಿಯ ಭಾಗ. ಈ ಕ್ರೀಡೆಗೆ ಸಿಗಬೇಕಾದ ಸ್ಥಾನ ಅಷ್ಟಾಗಿ ಸಿಗುತ್ತಿಲ್ಲ ಎಂಬುದನ್ನು ಚಿತ್ರದಲ್ಲಿ ಹೇಳಿದ್ದೇವೆ. 1981ರಲ್ಲಿ ತೆರೆ ಕಂಡಿದ್ದ, ಇತಿಹಾಸ ನಿರ್ಮಿಸಿದ ದ್ವಾರಕೀಶ್ ನಿರ್ದೇಶನದ ಗುರುಶಿಷ್ಯರು ಸಿನಿಮಾವೇ ಬೇರೆ, ಈ ಚಿತ್ರವೇ ಬೇರೆ ಎಂದು ಹೇಳಿದರು. ಚಿತ್ರದಲ್ಲಿ ದೈಹಿಕ ಶಿಕ್ಷಣ ಶಿಕ್ಷಕನಾಗಿ ಅಭಿನಯಿಸಿದ್ದು, ಪಾತ್ರ ಬಹಳ ಖುಷಿ ನೀಡಿದೆ. ನನ್ನ ವೃತ್ತಿಜೀವನದಲ್ಲಿ ಸಾರ್ಥಕತೆ ಸಿಕ್ಕಿದ್ದರೆ ಅದುವೇ ಈ ಸಿನಿಮಾ. ಈ ಚಿತ್ರದಲ್ಲಿ ನನಗಿಂತ ಹೆಚ್ಚು ಪರಿಶ್ರಮ ಪಟ್ಟವರು ಮಕ್ಕಳು. ಎಂಟು ತಿಂಗಳಿಂದ ರಾಷ್ಟ್ರೀಯ ಕೋಚ್ ಅವರಿಂದ ತರಬೇತಿ ಕೊಡಿಸಿದ್ದೇವೆ. ಖೋ ಖೋ ಬಗ್ಗೆ ತಿಳಿಯದ ಮಕ್ಕಳು ಅದನ್ನು ಕಲಿತು ಆಡಿರುವುದು ಮೆಚ್ಚುವ ವಿಚಾರ. ಇದು ಕಷ್ಟಕರ ಆಟ. ಇಲ್ಲಿ ಕೌಶಲದಷ್ಟೆ ಸಾಮರ್ಥ್ಯವೂ ಬೇಕು. ಖೋ ಖೋ ಆಡಿದವರು ವಿಶ್ವದ ಯಾವ ಆಟವನ್ನಾದರೂ ಆಡಬಲ್ಲರು. ಚಿತ್ರದಲ್ಲಿ ಮಕ್ಕಳು ಡೂಪ್ ಇಲ್ಲದೇ ಡೈವ್ ಹೊಡೆದಿದ್ದಾರೆ. ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಇದೀಗ ವೃತ್ತಿಪರ ಆಟಗಾರರಾಗಿ ವಿವಿಧ ಕ್ಲಬ್‌ಗಳಿಗೆ ಆಡುತ್ತಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಹಲವು ಪ್ರಥಮಗಳಿಗೆ ಈ ಚಿತ್ರ ಸಾಕ್ಷಿಯಾಗಿದೆ. ಖೋ ಖೋ ಕುರಿತಾದ ಮೊದಲ ಕನ್ನಡ ಸಿನಿಮಾ. ತರುಣ್ ಸುಧೀರ್ ಅವರು ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ಮಾಣ ಸಂಸ್ಥೆ ಶುರು ಮಾಡಿದ್ದಾರೆ. ಚಿತ್ರದ ಬಗ್ಗೆ ಹಲವು ಶಿಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು. 2000ನೇ ಇಸವಿಯಲ್ಲಿ ದಂಡನಾಯಕ ಸಿನಿಮಾ ಶೂಟಿಂಗ್‌ಗೆ ಬಂದಿದ್ದಾಗ ಪೂಜಾ ಹೋಟೆಲ್‌ನಲ್ಲಿ ತಂಗಿದ್ದೆ. ನಟ ಸುಧೀರ್ ಅವರ ನಾಟಕವೊಂದರ ಕಾಮಿಡಿ ಪಾತ್ರಕ್ಕೆ ನಾಲ್ಕು ದಿನ ರಿಹಸರ್ಲ್ ಮಾಡಿದ್ದೆ ಎಂದು ಮೆಲುಕು ಹಾಕಿದರು. ಸೂಜಿ ಎಂಬ ಹಳ್ಳಿ ಹುಡುಗಿಯ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಿಟಿಯಲ್ಲಿ ಬೆಳೆದದ್ದರಿಂದ ಹಳ್ಳಿ ಸೊಗಡು ಪರಿಚಯವಾಯಿತು. ಟ್ರೇಲರ್‌ಗೆ ಪ್ರಶಂಸೆ ವ್ಯಕ್ತವಾಗಿದೆ. ಆಣೆ ಮಾಡಿ ಹೇಳುತೀನಿ ಹಾಡು ಜನಪ್ರಿಯತೆ ಹೆಚ್ಚಿಸಿದೆ ಎಂದು ನಟಿ ನಿಶ್ವಿಕಾನಾಯ್ಡು ಹೇಳಿಕೊಂಡರು. ಹಾಸ್ಯ ನಟ ಮಹಾಂತೇಶ್, ನೀನಾಸಂ ಕಲಾವಿದ ಮಂಜು ಸಿರಿಗೆರೆ ಹಾಗೂ ಬಾಲ ಕಲಾವಿದರಾದ ಸಾಂಬಶಿವ, ಮಣಿಕಂಠ, ಸೂರ್ಯ, ರುದ್ರಗೌಡ, ಹರ್ಷಿತ್, ಏಕಾಂತ್ ಮೊದಲಾದವರು ಮಾತನಾಡಿ ಸೆ.23ಕ್ಕೆ ಚಿತ್ರ ಬಿಡುಗಡೆಯಾಗಲಿದ್ದು ಚಿತ್ರಮಂದಿರಗಳಿಗೆ ಹೋಗಿ ನೋಡಿ ಪ್ರೋತ್ಸಾಹಿಸಿ ಎಂದರು. ಶ್ರೇಯಾ ಕಾರ್ಯಕ್ರಮ ನಿರ್ವಹಿಸಿದರು. -
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net