

ಕೊಳ್ಳೇಗಾಲ: ಪಟ್ಟಣದ ಮಾನಸ ಶಿಕ್ಷಣ ಸಂಸ್ಥೆಯಲ್ಲಿ ವಿಜೃಂಭಣೆಯಿಂದ ನಡೆಯುತ್ತಿರುವ ಮಾನಸೋತ್ಸವ ಸಮಾರಂಭದ 2ನೇ ದಿನ ಶನಿವಾರ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ವಿವಿಧ ಶಾಲಾ- ಕಾಲೇಜಿನ ನಿವೃತ್ತ ಶಿಕ್ಷಕರನ್ನು ಮೈಸೂರು ವಿಶ್ವವಿದ್ಯಾಲಯ ಪ್ರಭಾರ ಕುಲಪತಿ ಎಚ್.ರಾಜಶೇಖರ್ ಸನ್ಮಾನಿಸಿದರು.
ಗುರುವಿನಲ್ಲೇ ಸಕಲ ದೇವರನ್ನು ಕಾಣಬಹುದು. ಪ್ರತಿಯೊಬ್ಬ ವಿದ್ಯಾರ್ಥಿಯ ಯಶಸ್ಸಿನ ಹಿಂದೆ ಗುರು ಇರುತ್ತಾನೆ. ಇಂಥ ಸ್ಥಾನವನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದು ಸಲಹೆ ನೀಡಿದರು. ಮಾನಸೋತ್ಸವ ಅರ್ಥಪೂರ್ಣ ಕಾರ್ಯಕ್ರಮವಾಗಿದ್ದು, ಇದಕ್ಕೆ ಕಾರಣಕರ್ತರಾದ ಸಂಸ್ಥೆಯ ಕಾರ್ಯದರ್ಶಿ ಡಾ.ಎಸ್.ದತ್ತೇಶ್ ಕುಮಾರ್ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಚಾಮರಾಜನಗರ ಕೈಗಾರಿಕೆ ಹಾಗೂ ವಾಣಿಜ್ಯೋದ್ಯಮ ಹಿಂದುಳಿದಿದ್ದರೂ ಶೈಕ್ಷಣಿಕವಾಗಿ ಉತ್ತಮವಾಗಿದೆ ಎಂಬುದಕ್ಕೆ ಮಾನಸ ಶಿಕ್ಷಣ ಸಂಸ್ಥೆ ಸಾಕ್ಷಿ. ಇಲ್ಲಿ ಓದುವ ಮಕ್ಕಳಿಗೆ ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿ ಉಜ್ವಲ ಭವಿಷ್ಯ ಸೃಷ್ಟಿಸಿಕೊಡಲಾಗುತ್ತಿದೆ. ಮಹಾನಗರಗಳಲ್ಲೇ ಎಷ್ಟೋ ಶಿಕ್ಷಣ ಸಂಸ್ಥೆ ನಡೆಸಲು ಸಾಧ್ಯವಾಗದೆ ಮುಚ್ಚಿಹೋಗಿವೆ. ಇಂಥ ಉದಾಹರಣೆ ಒಳಗೂ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುತ್ತಿರುವುದು ನಿಜಕ್ಕೂ ಸಾಧನೆ. ಡಾ.ದತ್ತೇಶ್ ಕುಮಾರ್ ದಣಿವರಿಯದ ವ್ಯಕ್ತಿ. ತನ್ನ ಬದ್ಧತೆ, ಪರಿಶ್ರಮದಿಂದ ಇಷ್ಟು ದೊಡ್ಡ ಮಟ್ಟಕ್ಕೆ ಸಂಸ್ಥೆ ಕಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಡ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುತ್ತಿದ್ದಾರೆ. ಮಾನಸ ಅಕ್ಷಯ ಯೋಜನೆಯಡಿ ಅನ್ನ ದಾಸೋಹವನ್ನು ಒದಗಿಸಿದ್ದಾರೆ. ಇಲ್ಲಿ ವ್ಯಾಸಂಗ ಮಾಡಿದವರು ದೇಶ, ವಿದೇಶದಲ್ಲೂ ದೊಡ್ಡ ಹುದ್ದೆ ಅಲಂಕರಿಸಿದ್ದಾರೆ. ಪ್ರತಿವರ್ಷವೂ ಈ ಸಂಸ್ಥೆಯ ಪ್ರಗತಿ ಹೆಚ್ಚುತ್ತಿದೆ ಎಂದರು.
ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಮಾತನಾಡಿ, ಪ್ರತಿಯೊಬ್ಬರ ಜೀವನ ಪರಿಪೂರ್ಣವಾಗಲು ಗುರುವಿನ ಮಾರ್ಗದರ್ಶನ ಅತ್ಯಗತ್ಯ. ಹಿಂದಿನ ಸಂಸ್ಕೃತಿಯನ್ನು ನೋಡಿದರೆ ನಮ್ಮ ಪರಂಪರೆ ಗುರುವಿನ ಸ್ಥಾನಕ್ಕೆ ಎಷ್ಟು ಮಹತ್ವ ಕೊಟ್ಟಿತ್ತು ಎಂಬುದು ತಿಳಿಯುತ್ತದೆ. ವಿಶ್ವದ ಸೃಷ್ಟಿ ಬ್ರಹ್ಮನಿಂದ. ಆದರೆ ನಿರ್ವಹಣೆ ವಿಷ್ಣು ಮಾಡುತ್ತಾನೆ. ಇದರ ಅಂತ್ಯ ಮಾಡುವ ಶಕ್ತಿಯನ್ನು ಮಹೇಶ್ವರ ಹೊಂದಿರುತ್ತಾನೆ. ಇವರೆಲ್ಲ ಗುರು ಸ್ಥಾನದಲ್ಲಿದ್ದಾರೆ. ಗುರುವಿಲ್ಲದೆ ಯಾರ ಜೀವನ ಪರಿಪೂರ್ಣವಾಗದು. ಅಂಥ ಗುರುಗಳಿಗೆ ಗುರುವಂದನಾ ಕಾರ್ಯಕ್ರಮ ಏರ್ಪಡಿಸಿ ಸನ್ಮಾನ ಮಾಡಿ ಗೌರವಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಬಣ್ಣಿಸಿದರು.
ಗುರುಗಳಿಗೆ ಸನ್ಮಾನ: ರಾಮಕೃಷ್ಣ, ಅಣ್ಣಾದ್ರಯ್ಯ, ಸರೋಜಮ್ಮ, ಶಿವಪ್ಪ, ಲಿಂಗೇಗೌಡ, ಪಾರ್ವತಮ್ಮ, ನಾಗರಾಜು, ವೀರ ಅಗರಶೆಟ್ಟಿ, ನಾಗರಾಜು, ಸರಸ್ವತಿ ಹೊನ್ನಪ್ಪ, ರಾಜೇಂದ್ರ, ನಾಗಸುಂದ್ರಮ್ಮ, ಉದಯನಂದ ಪ್ರಸಾದ್, ಗುರುಸ್ವಾಮಿ, ರವೀಂದ್ರ ನಾಥ್, ರಶ್ಮಿ, ನಾಗಸುಂದರಿ ಇನ್ನಿತರ ನಿವೃತ್ತ ಶಿಕ್ಷಕರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
ಸಾಂಸ್ಕೃತಿಕ ಕಲರವ: ಎರಡನೇ ದಿನದ ಮನಸೋತ್ಸವ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಕವಿ ಗೋಷ್ಠಿ, ಕವನ ವಾಚನ, ಜಾನಪದ ವೈವಿಧ್ಯ ಕಾರ್ಯಕ್ರಮ ನಡೆಯಿತು.
ಉಪವಿಭಾಗಾಧಿಕಾರಿ ಗೀತಾ ಹುಡೇದ, ಮಾನಸ ಶಿಕ್ಷಣ ಟ್ರಸ್ಟ್ ವಿಶೇಷಾಧಿಕಾರಿ ಕೆ.ಎಸ್. ನಾಗೇಂದ್ರ ಕುಮಾರ್, ನಿಸರ್ಗ ಪಿಯು ಕಾಲೇಜಿನ ಪ್ರಾಂಶುಪಾಲ ಕೃಷ್ಣೇಗೌಡ, ಸಂಯೋಜನಾಧಿಕಾರಿ ಟಿ.ಎಸ್. ರಾಮಕೃಷ್ಣ, ನಿಸರ್ಗ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಧನಂಜಯ್, ನಿಸರ್ಗ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಚೆನ್ನಶೆಟ್ಟಿ ಇದ್ದರು.
ಲಕ್ಷಾಂತರ ಮಕ್ಕಳ ಜೀವನ ರೂಪಿಸಿದ ಗುರು ಸ್ಥಾನಕ್ಕೆ ಮಾನಸ ಶಿಕ್ಷಣ ಸಂಸ್ಥೆ ಗೌರವಿಸುವ ಕೆಲಸ ಮಾಡಿದೆ. ಮಕ್ಕಳು ವೇದಿಕೆಯಲ್ಲಿ ಮಾತನಾಡುವ ಪ್ರತಿಯೊಬ್ಬ ಗಣ್ಯರ ಮಾತನ್ನು ಆಲಿಸಿ ಅದರಂತೆ ನಡೆದರೆ ಖಂಡಿತ ಜೀವನದಲ್ಲಿ ನಿಮಗೆ ಯಶಸ್ಸು ಸಿಗುತ್ತದೆ.
ಡಾ.ಎಸ್.ದತ್ತೇಶ್ ಕುಮಾರ್
ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ