

| ಪ್ರೊ.ಎಚ್.ಡಿ.ತಿಪ್ಪೇಸ್ವಾಮಿ
ಮರದೊಳಗಣ ಮಂದಾಗ್ನಿಯ ಉರಿಯದಂತಿರಿಸಿದೆ
ನೊರೆವಾಲೊಳಗೆ ತುಪ್ಪವ ಕಂಪಿಲ್ಲದಂತಿರಿಸಿದೆ
ಶರೀರದೊಳಗಾತ್ಮನನಾರೂ ಕಾಣದಂತಿರಿಸಿದೆ
ನೀ ಬೆರಸುವ ಭೇದಕ್ಕೆ ಬೆರಗಾದೆನಯ್ಯ ರಾಮನಾಥ.
ಒಂದು ವೃಕ್ಷ ಬೆಳೆಯಲು ಕ್ಷೇತ್ರ ಅಂದರೆ ಭೂಮಿ, ಜಲ ಮತ್ತು ಬೀಜ ಮುಖ್ಯವಾದದ್ದು. ಅದೇ ರೀತಿ ಒಂದು ಮಠ ಧರ್ಮಕ್ಷೇತ್ರವಾಗಿ ಬೆಳೆಯಲು ಅಲ್ಲಿನ ಗುರುಪರಂಪರೆ, ಭಕ್ತವೃಂದ ಮಹತ್ವಪೂರ್ಣ ಪಾತ್ರವಹಿಸುತ್ತವೆ. ಅನಾದಿಕಾಲದಿಂದಲೂ ಗುರು-ಶಿಷ್ಯಪರಂಪರೆ ಅಸ್ತಿತ್ವದಲ್ಲಿದ್ದು, ಗುರುವಿನ ಮಾರ್ಗದರ್ಶನವಿಲ್ಲದೆ ಯಾವ ಶಿಷ್ಯನೂ ಶಿಷ್ಯವೃತ್ತಿಯಲ್ಲಿ ಮುಂದುವರಿಯಲು ಸಾಧ್ಯವಾಗಿಲ್ಲ. ಈ ಒಂದು ಗುರು-ಶಿಷ್ಯಪರಂಪರೆ ವೇದೋಪನಿಷತ್ತುಗಳಿಂದ ಹಿಡಿದು ಇಂದಿಗೂ ಪ್ರಚಲಿತದಲ್ಲಿದೆ. ಆ ಸಂಬಂಧಗಳ ಪಾವಿತ್ರ್ಯಕ್ಕೆ ಯಾವುದೇ ಕುಂದುಬಾರದೆ ಯಾವುದೋ ಸಕಾರಣಕ್ಕೆ ಭೂಮಿಗೆ ಬಂದ ದೈವಾತ್ಮವು ಶಿಷ್ಯರಾಗಿ, ಗುರುವಾಗಿ ಪ್ರಚಂಡಶಕ್ತಿಯನ್ನು ಬಳಸಿ ತನ್ನ ಕುರುಹನ್ನುಳಿಸಿ ಮರೆಯಾಗಿರುವುದು ಇತಿಹಾಸದಲ್ಲಿರುವ ಸಾರ್ವಕಾಲಿಕ ಸತ್ಯ.
ಇಂತಹ ಪರಮ ಪಾವನ ಪವಿತ್ರಕ್ಷೇತ್ರವಾದ ಶ್ರೀಸಿದ್ಧಗಂಗಾಮಠ ಇದಕ್ಕೆ ಹೊರತೇನಲ್ಲ. ಈ ಮಠದಲ್ಲಿ ಶತ ಶತಮಾನಗಳಿಂದಲೂ ದೈವಾಂಶರು ಆವಿರ್ಭವಿಸಿ, ದೈವ ಪ್ರೇರಣೆಯಿಂದ ಮಠದ ಸಾರಥ್ಯವಹಿಸಿ ಜನತೆಯನ್ನು ಜ್ಞಾನ ಲೋಕದೆಡೆಗೆ ಕೊಂಡೊಯ್ಯತ್ತಿರುವುದು ಸರ್ವರಿಗೂ ತಿಳಿದ ವಿಚಾರ. ಈ ಹಿನ್ನೆಲೆಯಲ್ಲಿ ಶ್ರೀಸಿದ್ಧಗಂಗಾ ಕ್ಷೇತ್ರಾಧ್ಯಕ್ಷರಾಗಿದ್ದ ಶಿವಕುಮಾರ ಶ್ರೀಗಳ ಕರಕಮಲಸಂಜಾತರೆನಿಸಿ ಸ್ವೀಕರಿಸಲ್ಪಟ್ಟಿರುವ ಶ್ರೀ ಸಿದ್ದಲಿಂಗ ಸ್ವಾಮೀಜಿ ಪೂರ್ವಾಶ್ರಮದ ಹೆಸರು ‘ವಿಶ್ವನಾಥ’ ಎಂದು. ತಾಯಿ ಶಿವರುದ್ರಮ್ಮ, ತಂದೆ ಸದಾಶಿವಯ್ಯ. ಈ ಶರಣದಂಪತಿ ಕೊನೆಯ ಮಗನಾಗಿ 1963ರ ಜು.22ರಂದು ಜನ್ಮತಾಳಿದ್ದು, ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕು ಕಂಚುಗಲ್ ಬಂಡೇಮಠ ಶ್ರೀಗಳ ಜನ್ಮಸ್ಥಳ. ದೇಗುಲಮಠದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ ಬಳಿಕ ಈ ಸಂಸ್ಕಾರವಟುವನ್ನು ಶ್ರೀ ಸಿದ್ಧಗಂಗಾ ಗುರುಕುಲಕ್ಕೆ ತಂದು ಮಹಾಮಹಿಮರ ಪಾದಕಮಲಕ್ಕೊಪ್ಪಿಸಲಾಯಿತು.
ಶಿವಕುಮಾರ ಶ್ರೀಗಳ ಕರುಣೆಯಿಂದ ಶ್ರೀಹಳೇಮಠದಲ್ಲಿ ವಾಸ್ತವ್ಯ ದೊರಕಿ ಅಭ್ಯಾಸ ಆರಂಭಮಾಡಿದರು. ಶ್ರೀಗಳ ಪೂಜಾ ಸೇವಾ ಕಾರ್ಯದಲ್ಲಿ ನಿಯುಕ್ತರಾದರು. ಶ್ರದ್ಧಾಭಕ್ತಿಗಳಿಂದ ತಮ್ಮನ್ನು ತಾವು ಸಮರ್ಪಿಸಿಕೊಂಡರು. ಪದವಿ ಪೂರ್ವ ಶಿಕ್ಷಣ ಹಾಗೂ ಪದವಿ ಶಿಕ್ಷಣವನ್ನು ಪಡೆದರು. ಹಾಗೂ ತಮ್ಮ ನಡೆನುಡಿ ಸಚ್ಚಾರಿತ್ರ್ಯಗಳಿಂದ ತಮ್ಮನ್ನು ಇತರರಿಗಿಂತಲೂ ಭಿನ್ನವಾಗಿ ಗುರುತಿಸಿಕೊಂಡರು.
1988ರ ಜನವರಿ 29ರಂದು ವಿರಕ್ತಾಶ್ರಮ (ಜಂಗಮ ದೀಕ್ಷೆ) ಸ್ವೀಕಾರ ಸಮಾರಂಭ ನಡೆಯಿತು. ಅದೇ ಮಾರ್ಚ್ 31ರಂದು ಶ್ರೀಸಿದ್ದಲಿಂಗ ಸ್ವಾಮೀಜಿ ಶ್ರೀಮಠದ ಸಿದ್ಧಿಪುರುಷರ ಪರಂಪರೆಯಲ್ಲಿ ಸಮ್ಮಿಳಿತರಾದರು. ಎಲ್ಲರ ಕಷ್ಟ ತನಗಿರಲಿ! ಸುಖದ ಬಾಳು ನಿಮಗಿಲಿ ಎಂದು ಹಾರೈಸಿ, ಜಗತ್ತಿನ ಆ ಅಳಲು ದುಃಖದುಮ್ಮಾನದ ಭಾರವನ್ನು ಹೊತ್ತ ಮಹಾಚೇತನದ ದಿವ್ಯದೀವಟಿಗೆಯ ಮುಂದೆ ನಾನೆಷ್ಟರವನು? ಮೇರು ಸದೃಶ ವ್ಯಕ್ತಿತ್ವದ ಜ್ಯೋತಿಯ ಪ್ರಭಾವಲಯದಲ್ಲಿ ಬಾಳು ಬೆಳಗಿಸಲು ಬಂದ ನನಗೆ ದೊರೆತ ಅನಿರೀಕ್ಷಿತ ಆಸ್ಫೋಟ ಎಂದು ಭಾವಿಸಿದಂತೆ ತೋರಿತು.
ಶ್ರೀಮಠದ ಸಂಪೂರ್ಣ ಅಧಿಕಾರವನ್ನು 2012ರ ಆಗಸ್ಟ್ 4ರಂದು ಶಿವಕುಮಾರ ಶ್ರೀಗಳು ಹಸ್ತಾಂತರಿಸಿದಾಗಿನಿಂದಲೂ ಅಂದಿನಿಂದ ಇಂದಿನವರೆಗೆ ಶ್ರೀಗಳಿಗೆ ಹಾಗೂ ಶ್ರೀಮಠದ ಗೌರವಕ್ಕೆ ಒಂದಿನಿತೂ ಚ್ಯುತಿಬಾರದಂತೆ ನಡೆದುಕೊಂಡಿದ್ದಾರೆ. ಚಿನ್ನಕ್ಕೆ ಪುಟವಿಟ್ಟಂಥ ಅದ್ಭುತವಾದ ವ್ಯಕ್ತಿತ್ವ ಸಿದ್ದಲಿಂಗ ಶ್ರೀಗಳದ್ದು. ಪರಮ ತಪಸ್ವಿ ಶಿವಕುಮಾರ ಶ್ರೀಗಳವರ ಪೂರ್ಣಕೃಪೆಗೆ ಪಾತ್ರರಾಗಿ ಈ ಪರಮಪವಿತ್ರವಾದ ಪುಣ್ಯಕ್ಷೇತ್ರದ ಸಮಸ್ತ ಅಧಿಕಾರ ಸೂತ್ರಗಳನ್ನು ವಹಿಸಿಕೊಂಡು ಯಥಾರ್ಥದಲ್ಲಿ ಮುನ್ನಡೆಸುವ ಸಾಮರ್ಥ್ಯವನ್ನು ಪಡೆದಿರುವ ಮಹಾಮಾತೃಹೃದಯಿಗಳಾದ ಪರಮಪೂಜ್ಯ ಸಿದ್ದಲಿಂಗ ಶ್ರೀಗಳಿಗೆ ಅನಂತ ಪ್ರಣಾಮಗಳು.
(ಲೇಖಕರು ತುಮಕೂರಿನ ಶ್ರೀಸಿದ್ಧಗಂಗಾ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು)