ಗುರುವಿನ ಮಾರ್ಗದರ್ಶನದಿಂದ ಯಶಸ್ಸು ಸಾಧ್ಯ

12ATHANIGRAMIN1
Published on

ಅಥಣಿ ಗ್ರಾಮೀಣ: ಪಾಠದ ಜತೆಗೆ ಶರಣರ ವಚನಗಳನ್ನು ಅಧ್ಯಯನ ಮಾಡಿದಾಗ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಲು ಸಾಧ್ಯ ಎಂದು ಜನವಾಡ ಅಲ್ಲಮಪ್ರಭು ಆಶ್ರಮದ ಮಲ್ಲಿಕಾರ್ಜುನ ಸ್ವಾಮೀಜಿ ನುಡಿದರು.

ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸಾಧಕ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಪಾಲಕರು ಮಕ್ಕಳ ಮೇಲೆ ಒತ್ತಡ ಹಾಕದೇ ಪ್ರತಿಭೆ ಗುರುತಿಸಿ ಶಿಕ್ಷಣ ನೀಡಬೇಕು. ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆದರೆ ಯಶಸ್ಸು ಸಾಧ್ಯ. ಉತ್ತಮ ಸಾಧನೆ ಮಾಡುವ ಮೂಲಕ ತಂದೆ-ತಾಯಿ ಕನಸು ನನಸು ಮಾಡಬೇಕು ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಸಿದ್ಧಾರೂಢ ದೇವರಡ್ಡಿ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡುವುದರ ಜತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದರು.

ವಿವಿಧ ಸ್ಪರ್ಧೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಸ್‌ಡಿಎಂಸಿ ಉಪಾಧ್ಯಕ್ಷ ಚಂದು ಬೆಳ್ಳಂಕಿ, ಬಸಪ್ಪ ಖೋತ್, ಬಸಪ್ಪ ಚನ್ನಾಪುರ, ಗಿರೀಶ ಬೆಳ್ಳಿಗೇರಿ, ಪಾಂಡು ಭೋಸಲೆ, ನಿಂಗಪ್ಪ ಖೋತ್, ಶಿವಾನಂದ ಗಲಗಲಿ, ದುರಂದರ ಭೋಸಲೆ, ಬಾಬಣ್ಣ ಸಾರವಾಡ, ಮುಖ್ಯಶಿಕ್ಷಕ ತುಕಾರಾಮ ಬಾಗೆಣ್ಣವರ, ಸಂಗಪ್ಪ ಬೆಳ್ಳಂಕಿ, ಸಾದೇವ ಅರಬಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net