

ಚಾಮರಾಜನಗರ: ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಗುರುವಿನ ಮಾರ್ಗದರ್ಶನದಲ್ಲಿ ಸಾಗಿದರೆ ಯಶಸ್ಸು ಸಾಧ್ಯವಾಗುತ್ತದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ ಹೇಳಿದರು.
ನಗರದ ಹೊರ ವಲಯದ ಮರಿಯಾಲ ಜೆಎಸ್‌ಎಸ್ ಕೈಗಾರಿಕಾ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಜೆಎಸ್‌ಎಸ್ ಗ್ರಾಮೀಣ ಇನ್ಕ್ಯುಬೇಷನ್ ಮತ್ತು ಕೌಶಲ ಅಭಿವೃದ್ಧಿ ಕೇಂದ್ರ, ಜೆಎಸ್‌ಎಸ್ ಕೈಗಾರಿಕಾ ತರಬೇತಿ ಸಂಸ್ಥೆಯ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಲಿಂಗ್ಯೆಕ್ಯ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ 107ನೇ ಜಯಂತಿ ಮಹೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜೆಎಸ್‌ಎಸ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ನಾವೆಲ್ಲರೂ ಪುಣ್ಯವಂತರು. ರಾಜೇಂದ್ರಸ್ವಾಮೀಜಿಯ ದೂರದೃಷಿ ಹಾಗೂ ಅವರ ಪರಿಶ್ರಮದಿಂದ ಚಾಮರಾಜನಗರ ಜಿಲ್ಲೆಯಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಗಿವೆ. ವಿದ್ಯಾರ್ಥಿಗಳು ಪರಿಶ್ರಮದಿಂದ ವ್ಯಾಸಂಗ ಮಾಡುವ ಮೂಲಕ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದರು.
ಸಿದ್ಧಮಲ್ಲೇಶ್ವರ ವಿರಕ್ತ ಮಠದ ಶ್ರೀ ಚೆನ್ನಬಸವಸ್ವಾಮೀಜಿ ಮಾತನಾಡಿ, ರಾಜೇಂದ್ರ ಶ್ರೀಗಳು ಬಹಳ ಕಷ್ಟದ ಕಾಲದಲ್ಲಿ ಸುತ್ತೂರು ಸಂಸ್ಥಾನದ ಅಧ್ಯಕ್ಷರಾಗಿ ಶ್ರಮಪಟ್ಟು ಬೆಳೆಸುವ ಜತೆಗೆ ಭದ್ರ ಬುನಾದಿ ಹಾಕಿದ್ದಾರೆ. ವಿಶ್ವ ಮಟ್ಟಕ್ಕೆ ಜೆಎಸ್‌ಎಸ್ ಸಂಸ್ಥೆಯನ್ನು ಕಟ್ಟಿದ ಕೀರ್ತಿ ರಾಜೇಂದ್ರಶ್ರೀಗಳಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಐಟಿಐನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಜೆಎಸ್‌ಎಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಎಂ.ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಸಿ.ರೂಪಶ್ರೀ, ಕಲರ್‌ಟೋನ್ ಟೆಕ್ಸ್‌ಟೈಲ್ಸ್‌ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಜಿ.ಬಿ.ಪ್ರಶಾಂತ್, ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಬಿ.ಶಿವರಾಜು, ಆರ್‌ಐಎಸ್‌ಡಿಸಿ ಸಂಯೋಜನಾಧಿಕಾರಿ ಬಿ.ಎಂ.ಚಂದ್ರಶೇಖರ್, ಮಹದೇವಸ್ವಾಮಿ ಐಟಿಐ, ಅಧೀಕ್ಷಕ ಕೆ.ಎನ್.ಶಶಿಧರ್, ಎಂ.ಮಹೇಶ್, ಕೆ.ಎನ್.ಪ್ರದೀಪ್‌ಕುಮಾರ್, ಮರಿಯಾಲ ದಳಪತಿ ವೀರತ್ತಪ್ಪ ಇತರರು ಇದ್ದರು.