ಗುರುವಿನ ಮಾರ್ಗದರ್ಶನದಲ್ಲಿ ಉನ್ನತಿ

03 02
Published on

ಗುಬ್ಬಿ ತಾಲೂಕಿನ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಮಠದ ಶ್ರೀ ವಿದ್ಯಾಶಂಕರ ಸ್ವಾಮೀಜಿ ಅಭಿಪ್ರಾಯ

ತಿಪಟೂರು: ಕಬ್ಬಿಣವನ್ನೂ ಬಂಗಾರವಾಗಿಸುವ ಶಕ್ತಿ ಗುರುವಿಗಿದೆ ಎಂದು ಗುಬ್ಬಿ ತಾಲೂಕಿನ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಮಠದ ಶ್ರೀ ವಿದ್ಯಾಶಂಕರ ಸ್ವಾಮೀಜಿ ಹೇಳಿದರು.

ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಗುರುಸ್ತಪಾಹ ಧಾರ್ಮಿಕ ಸಮಾರಂಭ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, 7 ದಿನಗಳ ಕಾಲ ನಡೆಯುವ ಗುರುಸಪ್ತಾಹದಲ್ಲಿ ಸರ್ವ ಗುರುಗಳ ಆಶೀರ್ವಾದ ಸಿಕ್ಕು ಮೋಕ್ಷದ ದಾರಿ ಕಂಡುಕೊಳ್ಳಲಿ ಎಂಬ ಆಶಯದಿಂದ ದಶಕಗಳಿಂದ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ. ದೇಶದ ವ್ಯಕ್ತಿ ಪರಂಪರೆಯಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ. ಗುರುವಿಗಿಂತಾ ಮಿಗಿಲಾದ ವ್ಯಕ್ತಿ ಇಲ್ಲ ಎಂದು ಶಾಸ್ತ್ರಗಳು ಹೇಳಿವೆ. ಗುರುವಿನ ಆಶೀರ್ವಾದ, ಮಾರ್ಗದರ್ಶನವಿಲ್ಲದೇ ಉನ್ನತಿ ಸಾಧ್ಯವಿಲ್ಲ. ಸೂರ್ಯಕಿರಣವಿಲ್ಲದೇ ಕಮಲ ಹೇಗೆ ಅರಳುವುದಿ ಲ್ಲವೋ. ಇದೇ ರೀತಿ ಶಿಷ್ಯಂದಿರ ಹೃದಯ ದೇಗುಲದಲ್ಲಿ ಜ್ಞಾನ- ಭಕ್ತಿ ಅರಳಿಸಲು ಗುರುಗುಳಿಂದ ಸಾಧ್ಯ ಎಂದರು.

ಮಾಜಿ ಸಚಿವ ಬಿ.ಸಿ.ನಾಗೇಶ್​ ಮಾತನಾಡಿ, ಜೀವನ ಹೇಗಿರಬೇಕು, ಹೇಗೆ ಬದುಕಬೇಕೆಂಬುದನ್ನು ಪ್ರತಿ ವರ್ಷ ಇಲ್ಲಿನ ಧಾರ್ಮಿಕ ಸಮಾರಂಭದ ಮೂಲಕ ನಾಡಿಗೆ ತಿಳಿಸುತ್ತಿರುವ ಶ್ರೀಗಳು, ಮಾನವನಿಗೆ ಅಗತ್ಯವಿರುವ ವಿದ್ಯೆ, ಶ್ರದ್ಧೆ ಮತ್ತು ಧಾರ್ಮಿಕ ವಿಧಾನಗಳನ್ನು

ಕಲಿಸುತ್ತಿದ್ದಾರೆ. ಶ್ರೀಮಠದ ಅಭಿವೃದ್ಧಿಗೆ ನಿಷ್ಕಲ್ಮಶದಿಂದ ನೆರವಾಗಬೇಕಿದೆ ಎಂದರು. ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ.ಸುರೇಶ್​ಬಾಬು ಮಾತನಾಡಿ, ಸಮಾಜದಲ್ಲಿ ಶಾಂತಿ, ನೆಲೆಸಲು ಧಾರ್ಮಿಕ ಸಮಾರಂಭ ಮತ್ತು ಗುರುಗಳ ಮಾಗದರ್ಶನ ಅತ್ಯಗತ್ಯವಾಗಿದೆ. ಸಮಾಜಕ್ಕಾಗಿ ದುಡಿದವರನ್ನು ಗುರುತಿಸಿ ಸನ್ಮಾನ ಮಾಡುವುದರಿಂದ ಅವರಿಗೆ ಮತ್ತಷ್ಟು ಪ್ರೇರಣೆ ನೀಡಿದಂತಾಗುತ್ತೆ ಎಂದರು. ಶ್ರವಣಬೆಳಗೊಳ ಶಾಸಕ ಸಿ.ಎನ್​.ಬಾಲಕೃಷ್ಣ ಮಾತನಾಡಿ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ಧಾರ್ಮಿಕ ಶಕ್ತಿಗಳೊಂದಿಗಿನ ಹಿಂದು ಧರ್ಮದ ಭದ್ರ ಬುನಾದಿ ಮೇಲೆ ನಮ್ಮ ದೇಶ ಅಖಂಡವಾಗಿ ನಿಂತಿದೆ ಎಂದರು.

ಶಾಸಕ ಕೆ.ಷಡಕ್ಷರಿ ಮಾತನಾಡಿ, ತನ್ನದೇ ಆದ ಇತಿಹಾಸ ಹೊಂದಿರುವ ಶ್ರೀ ಕ್ಷೇತ್ರದಲ್ಲಿ ಅನ್ನದ ಜತೆಗೆ ಜ್ಞಾನ ದಾಸೋಹ 5ನೇ ಗುರುಗಳ ಕಾಲದಿಂದ ನಡೆದಿದ್ದು, 7 ನೇ ಶ್ರೀಗಳ ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂದಿದೆ. ಸರ್ಕಾರದಿಂದ ನಿರ್ವಹಿಸಲು ಸಾಧ್ಯವಾಗದ ಕೆಲವು ಕೆಲಸಗಳನ್ನು ಮಠ, ಮಾನ್ಯಗಳು ನಿರ್ವಹಿಸುತ್ತಿವೆ. ದೇಶ ವೈಜ್ಞಾನಿಕವಾಗಿ ಮುಂದುವರೆದಿದೆ. ಆದರೆ ಧಾರ್ಮಿಕ ಶ್ರೇಷ್ಠತೆಗೆ ಮಠ ಮಾನ್ಯಗಳು ಅಗತ್ಯ. ಶ್ರೀಗಳು ನಿತ್ಯ ಕರ್ಮದ ಮೂಲಕ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಅನ್ನ ದಾಸೋಹ ಮಾಡುವಲ್ಲಿ ನಿರತರಾಗಿದ್ದಾರೆ ಎಂದರು.

ಶ್ರೀ ಗುರುಪರದೇಶೀಕೇಂದ್ರ ಸ್ವಾಮೀಜಿ ಮಾತನಾಡಿದರು. ಪಂಡಿತ್​ ತಗಡೂರು ವೀರಭದ್ರಯ್ಯ, ಉಪನ್ಯಾಸಕ ರೇಣುಕಯ್ಯ ಉಪನ್ಯಾಸ ನೀಡಿದರು. ಸಾಧನೆ ಮಾಡಿದ ಶಿವಕುಮಾರ್​ ಮತ್ತು ಡಾ.ಪ್ರಿಯಾಂಕರಿಗೆ ಸನ್ಮಾನಿಸಲಾಯಿತು.ಧರ್ಮಸ್ಥಳ ಸಂಸ್ಥೆ ಜಿಲ್ಲಾ ನಿರ್ದೇಶಕ ಸತೀಶ್​ ಸುವರ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net