ಗುರುವಿನ ಮಾರ್ಗದರ್ಶನ ಪಡೆದು ಗುರಿಯನ್ನು ಛಲದಿಂದ ಸಾಧಿಸಿ

sri swamiji
ಶೃಂಗೇರಿ ಜೆಸಿಬಿಎಂ ಕಾಲೇಜಿನಲ್ಲಿ ಜಗದ್ಗುರು ಶ್ರೀ ಚಂದ್ರಶೇಖರಭಾರತೀ ಸ್ವಾಮೀಜಿ ಸಂಸ್ಮರಣೆ, ಸಂಸ್ಥಾಪಕರ ಸಂಸ್ಮರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಕಾಲೇಜಿನ ಭಾಮತಿ ಪುಸ್ತಕವನ್ನು ಹರಿಹರಪುರ ಶ್ರೀ ಬಿಡುಗಡೆಗೊಳಿಸಿದರು. ರಶ್ಮಿ, ನಾಗಭೂಷಣ್,ಪ್ರಶಾಂತ್, ತ್ಯಾಗರಾಜ್ ಇತರರಿದ್ದರು.
Published on

ಶೃಂಗೇರಿ: ಗುರು ಮತ್ತು ಗುರಿ ಬದುಕಿನಲ್ಲಿ ಅನ್ಯೋನ್ಯ ಸಂಬಂಧ ಹೊಂದಿರುವ ಪದಗಳು. ಗುರುವಿನ ಮಾರ್ಗದರ್ಶನದಿಂದ ಮಾತ್ರ ಉನ್ನತ ಗುರಿ ತಲುಪಲು ಸಾಧ್ಯ ಎಂದು ಹರಿಹರಪುರ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ತಿಳಿಸಿದರು.

ಶನಿವಾರ ಜೆಸಿಬಿಎಂ ಕಾಲೇಜಿನಲ್ಲಿ ಜಗದ್ಗುರು ಶ್ರೀ ಚಂದ್ರಶೇಖರಭಾರತೀ ಸ್ವಾಮೀಜಿ ಸಂಸ್ಮರಣೆ, ಸಂಸ್ಥಾಪಕರ ಸಂಸ್ಮರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮಳೆಯ ಹನಿ ಬಹಳಷ್ಟು ಪ್ರಯತ್ನಿಸಿ ನದಿ ಮೂಲಕ ಸಮುದ್ರ ಸೇರುತ್ತದೆ. ಸಮುದ್ರ ಸೇರಿದ ನಂತರ ಅದರ ಅಸ್ತಿತ್ವಕ್ಕೆ ಯಾವುದೇ ಧಕ್ಕೆ ಇರುವುದಿಲ್ಲ. ಹಾಗೆಯೇ ನಮ್ಮ ಗುರಿ ಕುರಿತು ಸ್ಪಷ್ಟ ನಿಲುವು ಇರಬೇಕು. ನಮ್ಮಲ್ಲಿ ಛಲ ಎಂಬುದು ಧುಮುಕುವ ಜಲಧಾರೆಯಂತೆ ಇರಬೇಕು. ಪ್ರಸ್ತುತ ನಮಗೆ ಅಂತಸ್ತು, ಅಧಿಕಾರ ಮುಖ್ಯವಾಗಿದೆ. ಇದು ನಮ್ಮ ಷರತ್ತುಬದ್ಧ ಜೀವನವಾಗಿರುತ್ತದೆ. ಜೀವನದಲ್ಲಿ ಪ್ರಯತ್ನ ಸಕಾರಾತ್ಮವಾಗಿ ಇರಬೇಕು. ಹಾಗೆಯೇ ವಿಧಿ ಕೂಡಾ ಅನುಕೂಲವಾಗಿರಬೇಕು. ಆನಂದ ಎನ್ನುವುದು ನಮ್ಮ ಸ್ವರೂಪ ಎಂದು ವೇದಾಂತ ಹೇಳಿದೆ. ಕೀರ್ತಿ, ಅಹಂಕಾರ ಇತ್ಯಾದಿ ಹೊರಜಗತ್ತಿನ ಆನಂದ. ಕೋಟಿ ಹಣವನ್ನು ಏನು ಮಾಡುತ್ತೀರಿ? ಎಂಬುದು ಪ್ರಶ್ನಾತೀತ. ಬ್ರಹ್ಮಾತ್ಮ ಭಾವ ಹೊರಹೊಮ್ಮಿದಾಗ ಮಾತ್ರ ನಾವು ಆನಂದ ಸ್ವರೂಪಿಗಳಾಗುತ್ತೇವೆ ಎಂದು ವಿಶ್ಲೇಷಿಸಿದರು.

ಮನಸ್ಸು ಎಲ್ಲವನ್ನೂ ನಿಯಂತ್ರಿಸುತ್ತದೆ. ಅದಕ್ಕೆ ನಿಯಮಿತ ಯೋಗಾಭ್ಯಾಸ ಪ್ರಮುಖ. ಅಮೆರಿಕ, ಜಪಾನ್ ತಂತ್ರಜ್ಞಾನದಲ್ಲಿ ಮುಂದೆ ಇವೆ. ಆದರೆ ನಮ್ಮ ದೇಶ ಆಧ್ಯಾತ್ಮಿಕ ತಳಹದಿ ಮೇಲೆ ನಿಂತು ಜಗತ್ತಿಗೆ ಆದರ್ಶವಾಗಿದೆ. ನಮ್ಮ ರಾಜಕೀಯ ವ್ಯವಸ್ಥೆ ಎಂದಿಗೂ ನಮ್ಮ ಉದ್ಧಾರಕ್ಕೆ ಇರುವುದಿಲ್ಲ. ರಾಜಕಾರಣಿಗಳಿಗೆ ದೇಶದ ಕಾಳಜಿಗಿಂತ ಅಧಿಕಾರದ ವ್ಯಾಮೋಹ ಹೆಚ್ಚಾಗಿರುತ್ತದೆ. ಬೇರೆ ದೇಶಗಳು ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಆದರೆ ನಮ್ಮ ದೇಶದ ಬಜೆಟ್‌ನಲ್ಲಿ ಸಂಶೋಧನೆಗೆ ಹೆಚ್ಚಿನ ಒತ್ತು ನೀಡುತ್ತಿಲ್ಲ. ದೇಶದಲ್ಲಿ ಅತ್ಯುತ್ತಮ ಮೇಧಾವಿಗಳು ಇದ್ದಾರೆ. ಅವರ ಸೃಜನಶೀಲತೆಗೆ ಒತ್ತು ನೀಡುವ ರಾಜಕೀಯ ಇಚ್ಛಾಶಕ್ತಿ ಇಲ್ಲಿ ಇರುವುದಿಲ್ಲ ಎಂದು ಹೇಳಿದರು.

ನಿವೃತ್ತ ಪ್ರಾಧ್ಯಾಪಕ ಕೆ.ಬಿ.ಪ್ರಕಾಶ್ ಹಾಗೂ ಸಿಬ್ಬಂದಿ ಸುರೇಶ್ ಅವರನ್ನು ಗೌರವಿಸಲಾಯಿತು. ಕಾಲೇಜಿನ ಭಾಮತಿ ಪುಸ್ತಕವನ್ನು ಹರಿಹರಪುರ ಶ್ರೀಗಳು ಬಿಡುಗಡೆಗೊಳಿಸಿದರು.

ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ನಿವೃತ್ತ ಪ್ರಾಚಾರ್ಯ ಡಾ. ಎಂ.ಸ್ವಾಮಿ, ಪ್ರಾಧ್ಯಾಪಕ ಎ.ಜಿ.ಪ್ರಶಾಂತ್, ಮಣಿಪಾಲ ಅಕಾಡೆಮಿ ಎಜ್ಯುಕೇಶನ್ ಆಡಳಿತಾಧಿಕಾರಿ ಶ್ರೀಧರ್ ಪೈ, ವಿಶ್ವಸ್ಥ ಮಂಡಳಿ ಸದಸ್ಯರಾದ ಟಿ.ಟಿ.ಕಳಸಪ್ಪ, ತ್ಯಾಗರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net