

ಚಿಟಗುಪ್ಪ: ಮಹಾಪುರುಷರ ತತ್ವಾದರ್ಶಗಳು ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ಸಾಗಿದರೆ ಜೀವನ ಸಾರ್ಥವಾಗಲಿದೆ ಎಂದು ಸಂಸದ ಸಾಗರ ಖಂಡ್ರೆ ಹೇಳಿದರು.
ಕರಕನಳ್ಳಿ ಗ್ರಾಮದಲ್ಲಿ ಗುರುವಾರ ಹಾಲುಮತದ ಶ್ರೀ ಮಹಾ ಶಿವಯೋಗಿ ಗುಂಡಪ್ಪ ಮುತ್ಯಾಅವರ ೩೦ನೇ ಪುಣ್ಯಸ್ಮರಣೆ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಆಧುನಿಕತೆ ಜೀವನದ ಜಂಜಾಟದಲ್ಲಿ ಕೇವಲ ಹಣ, ಆಸ್ತಿ ಗಳಿಸುವುದರಲ್ಲಿ ಜೀವನ ವ್ಯರ್ಥ ಮಾಡಿಕೊಳ್ಳುತ್ತಿದ್ದೇವೆ. ಸ್ವಲ್ಪಮಟ್ಟಿಗಾದರೂ ಸಮಯ ಉಳಿಸಿಕೊಂಡು ಧರ್ಮಕಾರ್ಯದೊಂದಿಗೆ ಸತ್ಸಂಗ, ಕಾರ್ಯಗಳಲ್ಲಿ ಪಾಲ್ಗೊಳ್ಳುವುದು ಅಗತ್ಯವಾಗಿದೆ ಎಂದರು.
ಈ ಭಾಗದಲ್ಲಿ ನಡೆದಾಡಿದ ಶಿವಯೋಗಿ ಶ್ರೀ ಗುಂಡಪ್ಪ ಮುತ್ಯಾಅವರು ಜನರಲ್ಲಿ ಧರ್ಮಜಾಗೃತಿ ಮೂಡಿಸಿರುವ ಸೇವೆ ಅಪಾರವಾಗಿದೆ. ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಭಕ್ತರ ಅನುಕೂಲಕ್ಕಾಗಿ ಅಭಿವೃದ್ಧಿಗೆ ಸದಾ ಸಹಾಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಯಾದಗಿರಿ ವಿಶ್ವಕರ್ಮ ಏಕದಂಡಗಿ ಮಠದ ಶ್ರೀ ಕುಮಾರ ಸ್ವಾಮೀಜಿ ಮಾತನಾಡಿ, ಸತ್ಸಂಗ, ಧರ್ಮಸಭೆಯಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ಶಾಂತಿ ದೊರೆಯುವುದರ ಜತೆಗೆ ನೆಮ್ಮದಿ ಜೀವನ ನಡೆಸಲು ಸಾಧ್ಯವಾಗಲಿದೆ. ಈ ಮೂಲಕ ಗುರುವಿನ ಆಶೀರ್ವಾದಕ್ಕೂ ಪಾತ್ರರಾಗಿ ಮಕ್ಕಳಲ್ಲಿಯೂ ಉತ್ತಮ ಸಂಸ್ಕಾರ ಮೂಡಿಸಲು ಸಾಧ್ಯವಾಗುತ್ತದೆ ಎಂದರು.
ಬೇಮಳಖೇಡದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಾತನಾಡಿ, ಮುತ್ಯಾನವರ ಪುಣ್ಯಸ್ಮರಣೆ ನಿಮಿತ್ತ ಇಲ್ಲಿ ಶ್ರೀ ರಾಜಪ್ಪ ಮುತ್ಯಾ ಅವರ ನೇತೃತ್ವದಲ್ಲಿ ಧಾರ್ಮಿಕತೆಯೊಂದಿಗೆ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಭಕ್ತರಿಗೆ ಜ್ಞಾನ, ಅನ್ನದಾಸೋಹ ಮಾಡುತ್ತಿರುವುದು ಸಂತಸ ಮೂಡಿಸಿದೆ ಎಂದರು.
ಗುಂಡಪ್ಪ ಮುತ್ಯಾ ಟ್ರಸ್ಟ್ ಅಧ್ಯಕ್ಷ ಶ್ರೀ ರಾಜಪ್ಪ ಮುತ್ಯಾ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೌರದ ಬೀರಪ್ಪ ಮುತ್ಯಾ, ವಿಧಾನ ಪರಿಷತ್ ಮಾಜಿ ಸಭಾಪತಿ ರಘುನಾಥ ಮಲ್ಕಾಪುರೆ, ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಅಮೃತರಾವ ಚಿಮ್ಮಕೋಡೆ, ಸಂವಿಧಾನ ಸಂರಕ್ಷಣಾ ಸಮಿತಿ ಜಿಲ್ಲಾ ಸಂಚಾಲಕ ಬಸವರಾಜ ಮಾಳಗೆ, ಬೀದರ್ ಜೆಸ್ಕಾಂ ಇಇ ರಮೇಶ ಪಾಟೀಲ್, ಎಸಿಎಫ್ ರಮೇಶ ಕನಕಟಕರ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಸಂಜೀವಕುಮಾರ ಅತಿವಾಳೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ನಾಗೇಶರೆಡ್ಡಿ, ಗ್ರಾಪಂ ಅಧ್ಯಕ್ಷೆ ನೀಲಾವತಿ, ಉಪಾಧ್ಯಕ್ಷೆ ಗುಂಡಮ್ಮ ಫುಲ್ಲಾ, ಚಲಚಿತ್ರ ನಟ ಕೃಷ್ಣರಾಜ್ ಅರ್ಕಿ, ಶರದ ನಾರಾಯಣಪೇಟಕರ, ಡಾ.ಸಾಗರ ಸೌರಭ, ಡಾ.ಗಂಗಧಾರ ಬುಡಗಾ, ಡಾ.ಅಶ್ವಿನಿ ಪ್ರಭಾ, ಬಕ್ಕರೆಡ್ಡಿ ನಾಗನಕೇರಾ, ಶಂಕರ ಪಂಚಾಳ, ಶಿವರೆಡ್ಡಿ, ಶಿವರಾಜ ನೀಲಾ, ನಿಲೇಶ ಮಳ್ಳಿ, ಜಗನಾಥ ಗಾರಿ ಇತರರಿದ್ದರು. ಮಹಾರುದ್ರ ಉಡಬಾಳ ಸ್ವಾಗತಿಸಿದರು. ಕಲಾವಿದ ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು. ನಾಗಪ್ಪ ಮಕಾಜಿ ವಂದಿಸಿದರು.
ಉಚಿತ ಆರೋಗ್ಯ ತಪಾಸಣೆ: ಪುಣ್ಯಸ್ಮರಣೆ ನಿಮಿತ್ಯ ಬೆಳಗ್ಗೆಯಿಂದ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ಕಲಾವಿದ ಗೋಪಿ ಎಚ್. ಅವರಿಂದ ನಾನಾ ರಾಜಕೀಯ ನಾಯಕರ ಹಾಗೂ ಖ್ಯಾತ ಚಿತ್ರನಟರ ಧ್ವನಿಯೊಂದಿಗೆ ಮಿಮಿಕ್ರಿ ಮಾಡಿ ಭಕ್ತರನ್ನು ರಂಜಿಸಿದರು. ಬೀದರ್‌ನ ರಾಣಿ ಸತ್ಯಾಮೂರ್ತಿ ನೃತ್ಯ ಅಕಾಡೆಮಿ ತಂಡದಿಂದ ನಡೆದ ಹಲವು ನೃತ್ಯಗಳು, ವಿವಿಧ ಕಲಾವಿದರಿಂದ ನಡೆದ ಸಂಗೀತ, ಹಾಸ್ಯ ಕಾರ್ಯಕ್ರಮಗಳು ಭಕ್ತರ ಮನಸೊರೆಗೊಂಡವು.
ಕರಕನಳ್ಳಿ ಗ್ರಾಮ ಶ್ರೀ ಗುರು ಗಂಗಾಧರ ಬಕ್ಕಪ್ರಭುಗಳ ಪುಣ್ಯ ಕ್ಷೇತ್ರ. ಇಂತಹ ಪವಿತ್ರ ಸ್ಥಳದಲ್ಲಿ ಶ್ರೀ ಶಿವಯೋಗಿ ಗುಂಡಪ್ಪ ಮುತ್ತಾನವರು ಸಹ ಜಾತಿ ಮತ ಎನ್ನದೇ ಎಲ್ಲರಿಗೂ ಧರ್ಮ ಉಪದೇಶ ಮಾಡಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಿದ್ದಾರೆ. ಅವರ ಮಹಿಮೆ ಅಪಾರವಾಗಿದೆ. ಸುಮಾರು ೩೦ ವರ್ಷಗಳಿಂದ ಅವರ ಪುಣ್ಯಸ್ಮರಣೋತ್ಸವ ವೈವಿಧ್ಯಮಯವಾಗಿ ಆಚರಿಸಿಕೊಂಡು ಬರುತ್ತಿರುವುದು ಹಾಗೂ ಇಲ್ಲಿ ಸೇರಿರುವ ಅಪಾರ ಭಕ್ತ ಸಮೂಹವೇ ಸಾಕ್ಷಿಯಾಗಿದೆ.
| ಸಾಗರ ಖಂಡ್ರೆ ಸಂಸದ