

ಬಸವಕಲ್ಯಾಣ: ಜನತೆಯಲ್ಲಿರುವ ಅಂಧಕಾರ, ಅಂಧಾನುಕರಣೆ, ಮೌಡ್ಯ, ನಕರಾತ್ಮಕ ಧೋರಣೆ ಇತ್ಯಾದಿ ಅನಿಷ್ಟಗಳ ಮೇಲೆ ಬೆಳಕು ಚೆಲ್ಲಿ ಬದುಕಿಗೊಂದು ಸ್ಪಷ್ಟತೆ ದೊರಕಿಸಿಕೊಡುವ ಧೀಶಕ್ತಿ ಗುರುವಿನಲ್ಲಿರುತ್ತದೆ ಎಂದು ಹಾರಕೂಡ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.
ಹಾರಕೂಡ ಶ್ರೀಮಠದಲ್ಲಿ ೧೯೯೭-೯೮ನೇ ಸಾಲಿನ ಹಾರಕೂಡ ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಗುರುವಂದನೆ ಹಾಗೂ ೭೪೨ನೇ ತುಲಾಭಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ವಿದ್ಯಾವಂತ ಧರ್ಮತ್ಮನಾಗಿ ಬದುಕಲು ಧರ್ಮ ಗುರುವಿನ ದೀಕ್ಷೆ ಅತ್ಯಂತ ಮಹತ್ವದಾಗಿದೆ. ಗುರುಪಥವ ಅಳವಡಿಸಿಕೊಂಡರೆ ಯಾವ ಪಂಥದ ಅವಶ್ಯಕತೆಯೂ ಇರುವುದಿಲ್ಲ. ನಾವು ಪಡೆಯುವ ಶಿಕ್ಷಣ ಪಠ್ಯಕ್ಕೆ ಸೀಮಿತವಾಗದೆ, ಜೀವನ ದರ್ಶನ ನೀಡುವಂತಹದ್ದಾಗಿರಬೇಕು. ಇಂದಿನ ಕಣ್ಣೋಟದಿಂದ ನಿನ್ನೆಯ ಇತಿಹಾಸ, ನಾಳಿನ ಭವಿಷ್ಯದ ಅರವಿನಿಂದ ವರ್ತಮಾನದಲ್ಲಿ ನೆಮ್ಮದಿಯಿಂದ ಬದುಕುವ ಜೀವನ ಕಲೆ ಕರಗತ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪ್ರತಿ ಗ್ರಾಮದ ಸರಕಾರಿ ಶಾಲೆಗಳು ಆ ಊರಿನ ನೈಜ ಸಂಪತ್ತಿನ ಕೇಂದ್ರಗಳಾಗಿದ್ದು, ಹಾರಕೂಡದ ಪ್ರಾರ್ಥಮಿಕ ಮತ್ತು ಪ್ರೌಢಶಾಲೆಯ ೧೯೯೭-೯೮ನೇ ಸಾಲಿನ ವಿದ್ಯಾರ್ಥಿಗಳು ತೋರಿದ ಗುರುಭಕ್ತಿ ಮೆಚ್ಚುವಂತಹದ್ದು, ಇಡೀ ಸ್ನೇಹ ಬಳಗ ನೆಮ್ಮದಿಯಿಂದ ಬದುಕುವಂತಾಗಲಿ ಎಂದು ಶುಭ ಹಾರೈಸಿದರು.
ಮೇಘರಾಜ ನಾಗರಾಳೆ ಮಾತನಾಡಿದರು. ಮಹೇಶ ನಾಗರಾಳೆ ಪ್ರಾಸ್ತಾವಿಕ ಮಾತನಾಡಿದರು. ಹಳೆಯ ವಿದ್ಯಾರ್ಥಿಗಳಾದ ಜ್ಞಾನೇಶ್ವರ ಮಂಡೆ, ಪ್ರೇಮಿಲಾ ದೇಗಾಂವ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮಲ್ಲಿನಾಥ ಹಿರೇಮಠ ಹಾರಕೂಡ, ರಾಜಕುಮಾರ ಬಿರಾದಾರ ಸಿರಗಾಪುರ, ಸುಭಾಷ ಮುರುಡ, ಕಾಶಪ್ಪ ದೇಗಾಂವ, ಗೋವಿಂದರಾವ ಪಾಟೀಲ್ ಸೈದಾಪುರ, ಶಿವರಾಜ ಪಾಟೀಲ್ ಇತರರಿದ್ದರು.
ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು. ಕುಮಾರಿ ಅನುಶ್ರೀ ಪೀರಜೆ ಭಕ್ತಿ ಗೀತೆ ಪ್ರಸ್ತುತಪಡಿಸಿದರು. ವಿಜಯಕುಮಾರ ಕುಲಕರ್ಣಿ, ಶರಣಪ್ಪ ಜಮಾದಾರ ಸಂಗೀತ ಸೇವೆ ಸಲ್ಲಿಸಿದರು. ಶ್ರೇಯಾ ಬಿರಾದಾರ ಭಾರತ ನಾಟ್ಯ ನೋಡುಗರ ಗಮನ ಸೆಳೆಯಿತು. ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು. ವಿಜಯಕುಮಾರ ಜಮಾದಾರ ಸ್ವಾಗತಿಸಿದರು. ಶರಣು ಪರಂಡೆ ವಂದಿಸಿದರು.