

ಚಿಂತಾಮಣಿ: ಗುರುಗಳಲ್ಲಿ ಅನನ್ಯ ಭಕ್ತಿಯಿಂದ ಶರಣಾಗತಿಯಾದರೆ ಮುಂದಿನ ಬದುಕನ್ನು ಅವರೇ ರೂಪಿಸುತ್ತಾರೆ. ಮಾನವ ಜನ್ಮ ವ್ಯರ್ಥಮಾಡಿಕೊಳ್ಳದೆ ಸದುಪಯೋಗಪಡಿಸಿಕೊಳ್ಳಲು ಗುರುವಿನ ಅನುಗ್ರಹ ಬೇಕು ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಅಭಿಪ್ರಾಯಪಟ್ಟರು.
ತಾಲೂಕಿನ ಶ್ರೀಕ್ಷೇತ್ರ ಕೈವಾರದ ಶ್ರೀ ಯೋಗಿ ನಾರೇಯಣ ಮಠದಲ್ಲಿ ನಡೆದ ಗುರುಪೂರ್ಣಮಿ ಪ್ರಯುಕ್ತ ಭಾನುವಾರ ನಡೆದ ಸರಳ ಹಾಗೂ ಸಾಂಕೇತಿಕ ಗುರುಪೂಜಾ ಸಮಾರಂಭದಲ್ಲಿ ಮಾತನಾಡಿದರು.ನಮ್ಮಲ್ಲಿರುವ ಚಂಚಲ ಬುದ್ಧಿ ಹೋಗಲಾಡಿಸಲು ಗುರುಗಳ ಧ್ಯಾನ ಮಾಡುತ್ತಾ ಆತ್ಮಚಿಂತನೆ ಮಾಡಬೇಕು. ಬುದ್ಧಿಯಿಂದ ಮಾಡಿದ ಪೂರ್ವ ಕರ್ಮಗಳು ಗುರುಕೃಪೆಯಿಂದ ಈ ಜನ್ಮದಲ್ಲಿ ಬಿಟ್ಟು ಹೋಗುವುದು. ಗುರುಕೃಪೆ ಇಲ್ಲದೆ ಮೋಕ್ಷಪ್ರಾಪ್ತಿಯಾಗುವುದಿಲ್ಲ. ನಮ್ಮಲ್ಲಿರುವ ಅವಿದ್ಯೆಗಳನ್ನು ತೆಗೆದುಹಾಕುವ ಶಕ್ತಿ ಗುರುವಿಗೆ ಮಾತ್ರವಿದೆ ಎಂದರು.
ಗುರುಪೌರ್ಣಮಿಯ ಪ್ರಯುಕ್ತ ಪ್ರಾತ: ಕಾಲದಲ್ಲಿಯೇ ಸದ್ಗುರು ಯೋಗಿ ನಾರೇಯಣ ತಾತಯ್ಯನವರ ದೇವಾಲಯದಲ್ಲಿ ಪೂಜಾ ಕೈಕಂರ್ಯಗಳನ್ನು ಶಾಸ್ತ್ರೋಕ್ತವಾಗಿ ನಡೆಸಲಾಯಿತು. ಅಭಿಷೇಕದ ನಂತರ ರಾಜೋಪಚಾರ, ಅಷ್ಟಾವಧಾನ ಸೇವೆ ಸಮರ್ಪಿಸಲಾಯಿತು. ತಾತಯ್ಯನವರ ಮೂಲ ವಿಗ್ರಹಕ್ಕೆ ವಿಶೇಷವಾಗಿ ಅಲಂಕರಿಸಲಾಗಿತ್ತು. ಕರೊನಾ ಸಾಂಕ್ರಾಮಿಕ ವೈರಸ್ ಹರಡುವ ಹಿನ್ನಲೆಯಲ್ಲಿ ಕಾರ್ಯಕ್ರಮವನ್ನು ಸರಳವಾಗಿ ನೆರವೇರಿಸಲಾಯಿತು.ಗುರುಪೂಜೆ ಅಂಗವಾಗಿ ಗೋಷ್ಠಿ ಗಾಯನವನ್ನು ನಾದಸುಧಾರಸ ಸಂಕೀರ್ತನಾ ಯೋಜನೆ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್ ನೇತೃತ್ವದಲ್ಲಿ ಸಮರ್ಪಿಸಲಾಯಿತು.
ಕೈವಾರ ಟ್ರಸ್ಟ್ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ.ಸತ್ಯನಾರಾಯಣ, ಸದಸ್ಯರುಗಳಾದ ಪಿ.ವೇಣುಗೋಪಾಲ್, ಬಾಗೇಪಲ್ಲಿ ನರಸಿಂಹಪ್ಪ, ಗಣೇಶ್ ಚಂದ್ರಪ್ಪ, ಗ್ರಾಮಸ್ಥರು ಉಪಸ್ಥಿತರಿದ್ದರು.