ಗುರುವಿಗೆ ಮಿಗಿಲಾದುದು ಮತ್ತೊಂದಿಲ್ಲ

14kkr1
Published on

ಕಿಕ್ಕೇರಿ: ನಾಡು ನುಡಿಗೆ ಬದುಕನ್ನು ಮೀಸಲಾಗಿಸಿಕೊಂಡು ಯುವ ಜಾಗೃತಿ ಮೂಡಿಸಿದವರಲ್ಲಿ ರಸಋಷಿ ಕುವೆಂಪು, ಪ್ರೇಮ ಕವಿ ಕೆ.ಎಸ್. ನರಸಿಂಹಸ್ವಾಮಿ, ಗಾಯಕ ಸಿ. ಅಶ್ವಥ್‌ರಂತಹ ಮಹನೀಯರ ಕೊಡುಗೆ ಅವಿಸ್ಮರಣೀಯವಾಗಿದೆ ಎಂದು ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಹಾಗೂ ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದರು.


ಪಟ್ಟಣದಲ್ಲಿ ಇತ್ತೀಚೆಗೆ ಸಮಾನ ಮನಸ್ಕ ವೇದಿಕೆ ಏರ್ಪಡಿಸಿದ್ದ ಮರೆಯಲಾಗದ ಮಹನೀಯರು ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯೆ ಕಲಿಸಿದ ಎಲ್ಲರೂ ಗುರುಗಳೇ. ಗುರುವಿಗೆ ಮಿಗಿಲಾದುದು ಮತ್ತೊಂದಿಲ್ಲ ಎಂದರು.


ಮಾತೆಯರು ಕವಿ, ಸಾಹಿತಿಗಳ ಕಾವ್ಯ, ಗೀತೆಗಳ ಸಾರ ತಿಳಿದರೆ ಇಡೀ ನಾಡು ಸಂಸ್ಕೃತಿಯ ಬೀಡಾಗಲಿದೆ. ಮನೆಯ ಪಾಠಶಾಲೆಯಾಗಿದ್ದು, ಹೆಣ್ಣು ಕಲಿತರೆ ನಾಡೇ ಕಲಿತಂತೆ ಇನ್ನುವ ನಾಣ್ಣುಡಿ ಹುಸಿಯಾಗಲಾರದು ಎಂದರು.


ರಸಋಷಿ ಕುವೆಂಪು, ಕಿಕ್ಕೇರಿಯ ಒಲವಿನ ಕವಿ ಕೆ.ಎಸ್. ನರಸಿಂಹಸ್ವಾಮಿ ಅವರ ಕಾವ್ಯಕ್ಕೆ ಜೀವ ತುಂಬಿ ಸ್ವರ ಸಂಯೋಜನೆಯೊಂದಿಗೆ ಹಾಡಿದ ಗಾನ ಗಾರುಡಿಗ ಸಿ. ಅಶ್ವಥ್ ಅವರ ಗಾಯನ ಮೋಡಿ ಸದಾ ಜೀವಂತವಾಗಿದೆ. ಎಳೆಯರಿಂದ ವಯೋವೃದ್ಧರವರಿಗೆ ಎಲ್ಲರ ಮನತಣಿಸುವ ಗೀತೆಯ ಮೋಡಿ ಅಶ್ವಥ್ ಅವರದ್ದಾಗಿದೆ ಎಂದು ಸ್ಮರಿಸಿದರು.


ಕುವೆಂಪು ಅವರ ವಿರಚಿತ ನಾಡಗೀತೆ, ಕನ್ನಡವೇ ಸತ್ಯ…ಕನ್ನಡವೇ ನಿತ್ಯ, ಬಾ ಇಲ್ಲಿ ಸಂಭವಿಸು, ಕೆಎಸ್‌ನ ಅವರ ನಾವು ಭಾರತೀಯರು ಮತ್ತಿತರ ಗೀತೆಗಳಿಗೆ ಗಾಯಕ ಕಿಕ್ಕೇರಿ ಅವರೊಂದಿಗೆ ಮಹಿಳೆಯರು ಹಾಡಿ ಸಂಭ್ರಮಿಸಿದರು.


ಸಬ್‌ರಿಜಿಸ್ಟ್ರಾರ್ ಉಮಾದೇವಿ, ಲೇಖಕಿ ಕೆ.ಎನ್. ನಂದಿನಿ, ಅನ್ನಪೂರ್ಣ, ಎಸ್.ಎನ್. ಅರುಣಕುಮಾರಿ, ತ್ರಿವೇಣಿ, ಸುಕನ್ಯಾ, ನಾಗವೇಣಿ, ಗಾಯಿತ್ರಿ, ವರಲಕ್ಷ್ಮೀ, ರೇವತಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net