

ಸಂಕೇಶ್ವರ: ಆಧುನಿಕ ಜಗತ್ತಿನ ದಿನನಿತ್ಯದ ಒತ್ತಡ ಜೀವನದಲ್ಲಿ ಹುಟ್ಟಿದ ಊರು, ಹೆತ್ತವರು, ಅಕ್ಷರ ಕಲಿಸಿದ ಗುರುಗಳನ್ನು ನೆನೆಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಿರಿಯ ವಿದ್ಯಾರ್ಥಿಗಳೆಲ್ಲರನ್ನೂ ಒಟ್ಟುಗೂಡಿಸಿ, ಗುರುಗಳನ್ನು ಗೌರವಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಮುಖ್ಯ ಶಿಕ್ಷಕಿ ಹೇಮಾ ಬೋಳಗುಂಡಿ ಹೇಳಿದರು.
ಸಮೀಪದ ಬಾಡ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ೨೦೦೫ರಿಂದ ೨೦೦೭ರ ವರೆಗಿನ ವಿದ್ಯಾರ್ಥಿಗಳ ಒಕ್ಕೂಟದಿಂದ ಈಚೆಗೆ ಏರ್ಪಡಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯೋಪಾಧ್ಯಾಯ ಎಂ.ಎ. ಉಮರಾಣಿ ಮಾತನಾಡಿ, ಜೀವನದಲ್ಲಿ ಗುರಿ, ಛಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರವೇ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ ಎಂದರು.
ವಿದ್ಯಾರ್ಥಿಗಳ ಒಕ್ಕೂಟದಿಂದ ಸ್ವಂತ ಹಣದಲ್ಲಿ ಶಾಲೆಯ ಗ್ರಂಥಾಲಯಕ್ಕೆ ಪುಸ್ತಕ, ಕುರ್ಚಿ, ಟೇಬಲ್ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಲಾಯಿತು.
ಹಳೆಯ ವಿದ್ಯಾರ್ಥಿಗಳ ಒಕ್ಕೂಟದಿಂದ ಗುರುವಂದನೆ ಸಲ್ಲಿಸಿ ಗೌರವಿಸಲಾಯಿತು. ಪ್ರಾರಂಭದಲ್ಲಿ ಅಗಲಿದ ಗುರುಗಳು ಮತ್ತು ವಿದ್ಯಾರ್ಥಿಗಳಿಗೆ ಮೌನ ನಮನ ಸಲ್ಲಿಸಿದರು.
ಮುಖ್ಯೋಪಾಧ್ಯಾಯ ಎಂ.ಎಸ್.ಕವಡಿಮಟ್ಟಿ, ಶಿಕ್ಷಕರಾದ ಎಂ.ಬಿ. ಮೇತ್ರಿ, ಯು.ಸಿ.ದರ್ಶನ, ಶ್ರೀದೇವಿ ಸರ್ವಜ್ಞ, ಎಂ.ಎಸ್.ಸೋಮಣ್ಣವರ, ಎ.ಸಿ.ಅವರನಾಳೆ, ಎಂ.ಡಿ.ಢ0ಗೆ, ಜಿ.ಎಂ.ಶಿತೋಳಿ, ಎಂ.ಡಿ.ಲಬ್ಬಿ, ಮುಖ್ಯೋಪಾಧ್ಯಾಯ ಎಸ್.ಎಸ್. ಪಾಟೀಲ, ಶಾಲೆ ಅಧ್ಯಕ್ಷ ಸದಾಶಿವ ಕಾಪಸೆ, ಗ್ರಾಪ ಅಧ್ಯಕ್ಷ ರಾಜು ಹಿಂಗ್ಲಜೆ, ಸದಸ್ಯ ಪ್ರಕಾಶ ಮೈಲಾಕೆ, ಎಸ್‌ಡಿಎಂಸಿ ಮಾಜಿ ಸದಸ್ಯ ಕಾಶಿನಾಥ ದೇವಕತೆ ಇತರರು ಇದ್ದರು. ಶಿಕ್ಷಕಿ ಎಸ್.ಎಸ್.ಅರಳಿಕಟ್ಟಿ ಸ್ವಾಗತಿಸಿದರು, ಡಾ.ವಿಜಯಲಕ್ಷ್ಮಿ ಮಿರ್ಜೆ ನಿರೂಪಿಸಿದರು.