

ಅರಕಲಗೂಡು: ತಾಲೂಕಿನ ರಾಮನಾಥಪುರದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ರಾಯರ 354ನೇ ಆರಾಧನಾ ಮಹೋತ್ಸವ ಭಾನುವಾರ ಸಂಭ್ರಮದಿಂದ ಜರುಗಿತು.
ಜೀವನದಿ ಕಾವೇರಿ ದಂಡೆ ಮೇಲಿರುವ ಶ್ರೀ ಉತ್ತರಾಧಿ ಮಠದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಆರಾಧನಾ ಮಹೋತ್ಸವ ಪ್ರಯುಕ್ತ ಬೆಳಗಿನಿಂದಲೇ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ವಿಧಿವತ್ತಾಗಿ ಸಾಗಿದವು. ಧಾನ್ಯ ಪೂಜೆ, ಪೂರ್ವಾರಾಧನೆ, ಧ್ವಜಾರೋಹಣ, ಸುಪ್ರಭಾತ, ಅಷ್ಟೋತ್ತರ ಪಾರಾಯಣ, ಪಂಚಾಮೃತ, ಮಧ್ಯಾಹ್ನ ಮಹಾಪೂಜೆ, ಮಂಗಳಾರತಿ ನಡೆಯಿತು. ಶ್ರೀ ಉತ್ತರಾಧಿ ಮಠದ ಕನಕಾಚಾರ್ಯರ ಧಾರ್ಮಿಕ ಮುಖಂಡತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು.
ಶ್ರೀ ಉತ್ತರಾಧಿ ಮಠದ ಆವರಣದಲ್ಲಿ ಅನಂತ ಪದ್ಮನಾಭಾಚಾರ್ಯ ಅವರು ಶ್ರೀ ಮನ್ಮಹಾಭಾರತ ಉಪನ್ಯಾಸ ನಡೆಸಿಕೊಟ್ಟರು. ಶ್ರೀ ಮಠದಲ್ಲಿ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಯಿತು.