ಗುರುಭವನ ನಿರ್ಮಾಣಕ್ಕೆ ಜಮೀನು ಮಂಜೂರು

11NGD5
ನಂಜನಗೂಡಿನಲ್ಲಿ ನೂತನ ಗುರು ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಬಿ.ಹರ್ಷವರ್ಧನ್ ಭೂಮಿಪೂಜೆ ನೆರವೇರಿಸಿದರು. ಮಹದೇವಸ್ವಾಮಿ, ಸಿ.ಎನ್.ರಾಜು, ಮಹೇಶ್ ಇದ್ದರು.
Published on

ನಂಜನಗೂಡು: ಅಂದಾಜು ಐದು ಕೋಟಿ ರೂ.ವೆಚ್ಚದಲ್ಲಿ ಸುಸಜ್ಜಿತ ಗುರುಭವನ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಬಿ.ಹರ್ಷವರ್ಧನ್ ತಿಳಿಸಿದರು.

ನಗರದ ಗುಂಡ್ಲುಪೇಟೆ ಮುಖ್ಯರಸ್ತೆಯಲ್ಲಿರುವ ರೇಷ್ಮೆ ಭವನದ ಆವರಣದಲ್ಲಿ ಶನಿವಾರ ನೂತನ ಗುರುಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಸತತ ಎರಡೂವರೆ ವರ್ಷದ ಶ್ರಮದ ಫಲವಾಗಿ 1.18 ಗುಂಟೆ ಜಮೀನು ಗುರುಭವನಕ್ಕೆ ಮಂಜೂರಾಗಿದೆ.ಈಗಾಗಲೇ 25 ಲಕ್ಷ ರೂ. ಬಿಡುಗಡೆ ಮಾಡಲಾಗಿದ್ದು ಮುಂಬರುವ ದಿನಗಳಲ್ಲಿ 2 ಕೋಟಿ ರೂ.ಅನುದಾನವನ್ನು ಸರ್ಕಾರದಿಂದ ಕೊಡಿಸಿಕೊಡಲಾಗುವುದು. ಜತೆಗೆ ಸಂಸದ ಹಾಗೂ ವಿಧಾನಪರಿಷತ್ ಸದಸ್ಯರ ಅನುದಾನದ ನೆರವು ಪಡೆದು ನಿಗದಿತ ಕಾಲಾವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ನಂಜನಗೂಡನ್ನು ಸ್ಯಾಟಲೈಟ್ ನಗರವನ್ನಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದು ಕ್ಷೇತ್ರ ವ್ಯಾಪ್ತಿಯಲ್ಲಿ ಶಿಕ್ಷಣ, ಆರೋಗ್ಯ ಹಾಗೂ ರಸ್ತೆ ಕಾಮಗಾರಿಗೆ ಮೊದಲ ಆದ್ಯತೆ ನೀಡಲಾಗಿದೆ ಎಂದರು.
ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ 2018ರಲ್ಲಿ ಶಾಲಾ ಕಟ್ಟಡ ನಿರ್ಮಾಣ ಹಾಗೂ ದುರಸ್ತಿಗೆ 13 ಲಕ್ಷ ರೂ.ಗಳನ್ನು ವಿನಿಯೋಗ ಮಾಡಿದ್ದರೆ 2023ನೇ ಸಾಲಿನಲ್ಲಿ 25 ಕೋಟಿ ರೂ.ಗಳನ್ನು ವ್ಯಯಿಸಲಾಗುತ್ತದೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು ಮಾತನಾಡಿ, ಶಾಸಕ ಬಿ.ಹರ್ಷವರ್ಧನ್ ಅವರು ಗುರುಭವನ ನಿರ್ಮಾಣಕ್ಕೆ ಹೆಚ್ಚಿನ ಆಸಕ್ತಿ ತೋರಿದ್ದರಿಂದ ಆಯಕಟ್ಟಿನ ಪ್ರದೇಶದಲ್ಲಿ ನಿವೇಶನ ಲಭ್ಯವಾಗಿದೆ. ಶಿಕ್ಷಕರ ಬೇಡಿಕೆಯ ಗುರು ಭವನ ನಿರ್ಮಾಣದ ರೂವಾರಿಯಾಗಿರುವ ಶಾಸಕ ಬಿ.ಹರ್ಷವರ್ಧನ್ ಅವರಿಂದಲೇ ಮುಂಬರುವ ದಿನಗಳಲ್ಲಿ ಗುರು ಭವನದ ಉದ್ಘಾಟನೆಯಾಗಲಿ ಎಂದು ಆಶಿಸಿದರು.

ತಹಶೀಲ್ದಾರ್ ಎಂ.ಶಿವಮೂರ್ತಿ ಮಾತನಾಡಿದರು. 1.18 ಎಕರೆ ಪ್ರದೇಶವನ್ನು ಗುರು ಭವನಕ್ಕೆ ಮಂಜೂರು ಮಾಡಿದ್ದು ಪೂರ್ವ, ಪಶ್ಚಿಮ 439 ಹಾಗೂ ಉತ್ತರ, ದಕ್ಷಿಣ 138 ಅಡಿ ವಿಸ್ತೀರ್ಣದ ನಿವೇಶನದಲ್ಲಿ 5 ಕೋಟಿ ಅಂದಾಜು ವೆಚ್ಚದಲ್ಲಿ 100*250 ಅಳತೆಯಲ್ಲಿ ಮೂರು ಅಂತಸ್ತಿನ ಭವ್ಯ ಕಟ್ಟಡ ನಿರ್ಮಿಸಲು ಸಿದ್ಧಪಡಿಸಲಾಗಿರುವ ನೀಲಿನಕ್ಷೆಯನ್ನು ಸಮಾರಂಭದಲ್ಲಿ ಅನಾವರಣಗೊಳಿಸಲಾಯಿತು. ಇದೇ ಸಂದರ್ಭ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ನೆರವು ನೀಡಿರುವ 20ಕ್ಕೂ ಹೆಚ್ಚು ಶಿಕ್ಷಕರನ್ನು ಸನ್ಮಾನಿಸಲಾಯಿತು.

ನಗರಸಭಾಧ್ಯಕ್ಷ ಎಚ್.ಎಸ್.ಮಹದೇವಸ್ವಾಮಿ, ಬಿಆರ್‌ಸಿ ಕೆ.ಜಿ.ಮಹೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸೋಮೇಗೌಡ, ಪ್ರಧಾನ ಕಾರ್ಯದರ್ಶಿ ಮಹೇಶ್, ತಾಲೂಕು ಅಧ್ಯಕ್ಷ ಧರ್ಮರತ್ನಾಕರ, ಕಾರ್ಯದರ್ಶಿ ಸ್ವಾಮೇಶ್, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ನಗರಸಭೆ ಸದಸ್ಯರಾದ ಮಹದೇವಪ್ರಸಾದ್, ಮೀನಾಕ್ಷಿ ನಾಗರಾಜ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net