

ಅರಕಲಗೂಡು: ಪಟ್ಟಣದಲ್ಲಿ ಆದಿಚುಂಚನಗಿರಿ ಜಗದ್ಗುರು ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಸ್ಮರಣಾರ್ಥ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ನಡೆಯುವ ’ಗುರುತೋರಿದ ದಾರಿ-ತಿಂಗಳ ಮಾಮನ ತೇರು’ ಶತ ಹುಣ್ಣಿಮೆ ಕಾರ್ಯಕ್ರಮವನ್ನು ಫೆ.4, 5, 6 ರಂದು ಅಯೋಜಿಸಲಾಗಿದೆ ಎಂದು ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಬಿಜಿಎಸ್ ವಿದ್ಯಾ ಭವನದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಶತ ಹುಣ್ಣಿಮೆ ಕಾರ್ಯಕ್ರಮ ಫೆ.4, 5, 6ರಂದು ಅರಕಲಗೂಡಿನಲ್ಲಿ ನಡೆಯಲಿದ್ದು, ಫೆ.4 ರಂದು ಗೊದುಳಿ ಲಗ್ನದಲ್ಲಿ ಜಗದ್ಗುರು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಬರಮಾಡಿಕೊಳ್ಳಲಾಗುವುದು. ಬಳಿಕ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. 5ರಂದು ಬೆಳಿಗ್ಗೆ ಪೂರ್ಣವತಿ ಹೋಮ, ಸ್ವಾಮೀಜಿಗೆ ಗುರುವಂದನೆ, ಭಕ್ತ ಸಂಗಮ ಕಾರ್ಯಕ್ರಮದ ಬಳಿಕ ಮದ್ಯಾಹ್ನ ಪ್ರಸಾದ ವಿನಿಯೋಗ. ಸಂಜೆ ಬೆಳದಿಂಗಳೋತ್ಸವ ನಡೆಯಲಿದೆ. 6ರಂದು ಬೆಳಿಗ್ಗೆ ಯುವ ಜನೋತ್ಸವ ನಡೆಯಲಿದ್ದು, ಮಧ್ಯಾಹ್ನ ಪ್ರಸಾದ ವಿನಿಯೋಗ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಕಾರ್ಯಕ್ರಮ ಮುಕ್ತಾಯವಾಗಲಿದೆ. ಮೂರು ದಿನವೂ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಪಟ್ಟಣದಲ್ಲೇ ವಾಸ್ತವ್ಯ ಹೂಡಲಿದ್ದಾರೆ ಎಂದರು. ಹಾಸನ ಶಾಖಾ ಮಠದಲ್ಲಿ ಪ್ರತಿ ತಿಂಗಳ ಹುಣ್ಣಿಮೆಯಲ್ಲೂ ಸಾಧಕರನ್ನು ಕರೆಸಿ ಜ್ಞಾನ ದಾಸೋಹ, ಅನ್ನ ದಾಸೋಹ ನೀಡಿ ಎಲ್ಲಾ ಧರ್ಮ ಗುರುಗಳು ಬಂದು ಹುಣ್ಣಿಮೆ ಕಾರ್ಯಕ್ರಮದಲ್ಲಿ ಪ್ರವಚನ ನೀಡುತ್ತಿದ್ದಾರೆ. ಈಗಾಗಲೇ ಅರಸೀಕೆರೆ, ಚನ್ನರಾಯಪಟ್ಟಣ, ಹಾಸನ, ಬೇಲೂರಿನಲ್ಲಿ ಹುಣ್ಣಿಮೆ ಕಾರ್ಯಕ್ರಮ ಮಾಡಿದ್ದು, ಇಂದು ಅರಕಲಗೂಡಿನಲ್ಲಿ ಶತ ಹುಣ್ಣಿಮೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಮಾಜದ ಮುಖಂಡರು ಇದ್ದರು.