ಗುರುತಿನ ಚೀಟಿ ಪಡೆದವರಿಗೆ ಆರೋಗ್ಯ ಉಚಿತ ಚಿಕಿತ್ಸೆ

6f5e4371-3a9d-48dc-890a-82354e44c725
Published on

ಮೈಸೂರು : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹೊರತಂದಿರುವ 2023ನೇ ಸಾಲಿನ ಡೈರಿಯನ್ನು ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಬಿಡುಗಡೆಗೊಳಿಸಲಾಯಿತು.

ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಬಿ. ಜಯರಾಮ್ ನೆಲ್ಲಿತ್ತಾಯ ಮಾತನಾಡಿ, ಈ ಯೋಜನೆ ಈಗ 11ನೇ ವರ್ಷಕ್ಕೆ ಕಾಲಿಟ್ಟಿದೆ. ಇದರಲ್ಲಿ ಸುಮಾರು 5 ಸಾವಿರ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ತಾಲೂಕು ಯೋಜನಾಧಿಕಾರಿಗಳು ಹಾಗೂ ಗ್ರಾಮ ಮಟ್ಟದ ಕಾರ್ಯಕರ್ತರು ಸೇರಿದ್ದು, ಸುಮಾರು 9 ಲಕ್ಷ ಫಲಾನುಭವಿಗಳಿದ್ದಾರೆ. ಅಲ್ಲದೆ 1.15 ಲಕ್ಷ ಸದಸ್ಯರಿದ್ದಾರೆ. ಇವರಿಗಾಗಿ ಆರೋಗ್ಯಕ್ಕೆ ಸಂಬಂಧಿಸಿದ 2 ಕಾರ್ಯಕ್ರಮಗಳಿದ್ದು, ಗುರುತಿನ ಚೀಟಿ ಪಡೆದವರಿಗೆ ಟ್ರಸ್ಟ್ ಗುರುತಿಸಿದ ಆಸ್ಪತ್ರೆಯಲ್ಲಿ ಆರೋಗ್ಯ ಉಚಿತ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ನಿರ್ಗತಿಕರಿಗೆ 500ರಿಂದ 2500 ರೂ.ವರೆಗೆ ಮಾಸಾಶನ, ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಇದಲ್ಲದೆ ದೇವಸ್ಥಾನ, ಕೆಎಂಎಫ್ ಕಟ್ಟಡಗಳಿಗೆ ನೆರವು ಸೇರಿದಂತೆ ಸಮಗ್ರ ಅಭಿವೃದ್ಧಿಯ ಕೆಲಸ ಕೈಗೊಳ್ಳಲಾಗುತ್ತಿದೆ. ಇದರೊಡನೆ ಅನಾಥ ಮಹಿಳೆಯರಿಗೆ 1 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲಾಗುತ್ತಿದೆ. ಸಂಸ್ಥೆ ನಡೆಸುತ್ತಿರುವ ಮದ್ಯವರ್ಜನ ಶಿಬಿರಗಳಲ್ಲಿ ನೂರಾರು ಜನರು ಮದ್ಯ ತ್ಯಜಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ. ರವಿಕುಮಾರ್, ಸಂಸ್ಥೆಯ ನಂದಿನಿ, ಪ್ರಸಾದ್, ಮಾಧವ್, ಎಂ. ಲಕ್ಷ್ಮಣ್, ಕುಸುಮಾ, ಶಶಿಕಲಾ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net